ಯಾರ ಮೊಸಳೆ ಕಣ್ಣೀರು ಮುಸ್ಲಿಂ ಮಹಿಳೆಯರಿಗೆ ಅಗತ್ಯವಿಲ್ಲ: ಝೊಹರಾ ಅಬ್ಬಾಸ್
ಮಂಗಳೂರು , ಡಿ. 20 : ಇಸ್ಲಾಂ ಒಂದು ಸಂತುಲಿತವಾದ ಧರ್ಮವಾಗಿದ್ದು, ಪುರುಷ-ಮಹಿಳೆ ಸೇರಿದಂತೆ ಪ್ರತೀ ಜೀವಿಗೂ ಅದರದೇ ಆದ ಹಕ್ಕು ಬಾಧ್ಯತೆಗಳನ್ನು ನೀಡಿದೆ. ನಮ್ಮ ದೇಶದ ಮಹಿಳೆಯರ ಬಗ್ಗೆ ಇಂದು ಕಣ್ಣೀರು ಹಾಕಲಾಗುತ್ತಿದೆ. ಆದರೆ ಯಾರ ಮೊಸಳೆ ಕಣ್ಣೀರು ನಮ್ಮ ದೇಶದ ಮುಸ್ಲಿಂ ಮಹಿಳೆಯರಿಗೆ ಅಗತ್ಯವಿಲ್ಲ. ಯಾಕೆಂದರೆ ಇಂದು ಮುಸ್ಲಿಂ ಮಹಿಳೆಯರು ಇಂದು ಶೈಕ್ಷಣಿಕವಾಗಿ ಮುಂದೆ ಸಾಗುತ್ತಿದ್ದಾರೆ ಎಂದು ಝೊಹರಾ ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಉಪಾಧ್ಯಕ್ಷೆ ಹಾಗೂ ಕ್ಯಾಲಿಕಟ್‍ನ ಗ್ಲೋಬಲ್ ಬ್ರಿಟಿಷ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಝೊಹರಾ ಅಬ್ಬಾಸ್ ಹೇಳಿದರು.
ಅವರು ಮುಸ್ಲಿಂ ಸೆಂಟ್ರಲ್ ಕಮಿಟಿ ಮಂಗಳೂರಿನ ಪುರಭವನದಲ್ಲಿ ಕೇಂದ್ರ ಸರಕಾರವು ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಇಂದು ಮುಸ್ಲಿಂ ಮಹಿಳೆಯರಿಗಾಗಿ ಆಯೋಜಿಸಿದ್ದ ಶರೀಅತ್ ಸಂರಕ್ಷಣಾ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ಉದ್ದೇಶ ಸಾಧ್ಯವಾಗೋದಿಲ್ಲ. ಒಂದು ನಮ್ಮ ದೇಶದಲ್ಲಿ ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಯಾದಲ್ಲಿ ಅದರ ಅತ್ಯಂತ ಹೆಚ್ಚು ಪರಿಣಾಮವು ಹಿಂದೂ ಬಾಂಧವರಿಗೆ ಆಗಲಿದೆ. ಯಾಕೆಂದರೆ ಅತ್ಯಂತ ಹೆಚ್ಚು ವಿಭಿನ್ನ ಸಂಪ್ರದಾಯ, ಆಚರಣೆಗಳು ಹಿಂದೂ ಬಾಂಧವರಲ್ಲಿದೆ. ಆದ್ದರಿಂದ ಇದು ಅಸಾಧ್ಯ ಎಂದು ಝೊಹರಾ ಅಭಿಪ್ರಾಯಿಸಿದರು.
ಎಷ್ಟು ಜನ ದಲಿತರನ್ನು ನೀವು ಮಠಾಧೀಶರೆಂದು ನೀವು ಒಪ್ಪುತ್ತೀರೀ? ಎಷ್ಟು ಜನ ವಿಧವೆಯರನ್ನು ನೀವು ಮರು ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದೀರಿ ಎಂದು ಸ್ಥಾಪಿತ ಹಿತಾಸಕ್ತಿಗಳೊಂದಿಗೆ ಪ್ರಶ್ನಿಸಿದ ಅವರು, ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕನ್ನು ಕಸಿಯಲು ಹೊರಟಿರುವುದು ಅಕ್ಷಮ್ಯ ಎಂದು ಹೇಳಿದರು.
ಯಾವುದೇ ಸರಕಾರವು ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸಾಧ್ಯವಿಲ್ಲ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರೇ ತಿಳಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಉತ್ಸಾಹ ತೋರುತ್ತಿರುವ ಕೇಂದ್ರ ಸರಕಾರವು ಸಮಾಜದಲ್ಲಿಂದು ಹೆಚ್ಚುತ್ತಿರುವ ಅಪರಾಧವನ್ನು ಮೆಟ್ಟಿಸಲು ಏಕರೂಪ ಕಾನೂನು ತರಲು ಉತ್ಸಾಹ ತೋರಲಿ ಎಂದು ಝೊಹರಾ ಅಬ್ಬಾಸ್ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







