ನೋಟು ರದ್ದತಿ : 'ತಲೆ ಚಚ್ಚಿಕೊಳ್ಳುತ್ತಿರುವ' ನಾಯ್ಡು ತಿಪ್ಪರಲಾಗ

ಹೈದರಾಬಾದ್,ಡಿ.20: ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ದತಿ ಕ್ರಮ ವನ್ನು ಆರಂಭದಲ್ಲಿ ಉತ್ಸಾಹದಿಂದಲೇ ಬೆಂಬಲಿಸಿದ್ದ ಬಿಜೆಪಿಯ ಮಿತ್ರ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಇದೀಗ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ನೋಟು ರದ್ದತಿಯ ಬಳಿಕ ಸೃಷ್ಟಿಯಾಗಿರುವ ನಗದು ಹಣದ ಕೊರತೆಯಿಂದುಂಟಾಗಿರುವ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂಬ ಚಿಂತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ವಿಜಯವಾಡಾದಲ್ಲಿ ಪಕ್ಷದ ಸಮಾರಂಭವೊಂದರಲ್ಲಿ ಟಿಡಿಪಿ ಶಾಸಕರು ಮತ್ತು ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ನೋಟು ರದ್ದತಿಯನ್ನು ನಾವು ಬಯಸಿರಲಿಲ್ಲ, ಆದರೆ ಅದು ಸಂಭವಿಸಿತು. ನೋಟು ರದ್ದತಿಗೊಂಡು 40ಕ್ಕೂ ಅಧಿಕ ದಿನಗಳು ಕಳೆದು ಹೋಗಿವೆ, ಆದರೆ ಇನ್ನೂ ಬಹಳಷ್ಟು ಸಮಸ್ಯೆಗಳು ಉಳಿದುಕೊಂಡಿವೆ. ಈವರೆಗೂ ಇವುಗಳಿಗೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ನ.8ರಂದು ಮೋದಿ ನೋಟು ನಿಷೇಧವನ್ನು ಪ್ರಕಟಿಸಿದಾಗ ಅದರ ಹೆಗ್ಗಳಿಕೆ ತನ್ನದೇ ಎಂದು ನಾಯ್ಡು ಹೇಳಿಕೊಂಡಿದ್ದರು. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕಲು ದೊಡ್ಡ ಮುಖಬೆಲೆಯ ನೋಟುಗಳನ್ನು ನಿಷೇಧಿಸುವಂತೆ ತಾನು ಪ್ರಧಾನಿಯವರನ್ನು ಪದೇಪದೇ ಕೋರಿಕೊಂಡಿದ್ದೆ ಎಂದು ಅವರು ಆಗ ಕೊಚ್ಚಿಕೊಂಡಿದ್ದರು.
ನಗದುರಹಿತ ಆರ್ಥಿಕತೆಯನ್ನು ಸಾಧಿಸಲು ಮಾರ್ಗಸೂಚಿಯನ್ನು ರೂಪಿಸಲು ರಚಿಸಲಾಗಿರುವ ಮುಖ್ಯಮಂತ್ರಿಗಳ ಸಮಿತಿಯ ಅಧ್ಯಕ್ಷರಾಗಿ ಇತ್ತೀಚಿಗೆ ನೇಮಕ ಗೊಂಡಿರುವ ನಾಯ್ಡು, ನೋಟುಗಳ ನಿಷೇಧ ತನ್ನ ಟಿಡಿಪಿ ಪಕ್ಷದ ನೈತಿಕ ವಿಜಯವಾಗಿದೆ ಎಂದು ಆಗ ಟ್ವೀಟಿಸಿದ್ದರು.
ಆದರೆ ವಿಜಯವಾಡಾದ ಪಕ್ಷದ ಸಮಾರಂಭದಲ್ಲಿ ಅಕ್ಷರಶಃ ತಿಪ್ಪರಲಾಗ ಹಾಕಿದ ಅವರು, ಮೂಲ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಜನರು ನಗದು ಹಣಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ಬ್ಯಾಂಕುಗಳು ಮತ್ತು ಎಟಿಎಂಗಳು ಈಗಲೂ ಖಾಲಿಖಾಲಿಯಾಗಿವೆ. ನೋಟು ರದ್ದತಿಯಿಂದ ಎದುರಾಗಿರುವ ಕಷ್ಟಗಳನ್ನು ಹಗುರಾಗಿಸಲೆಂದೇ ನಾನು ದಿನಕ್ಕೆ ಎರಡು ಗಂಟೆಗಳನ್ನು ಮೀಸಲಿಟ್ಟಿದ್ದೇನೆ. ದಿನವೂ ನಾನು ತಲೆ ಚಚ್ಚಿಕೊಳ್ಳುತ್ತಿದ್ದೇನೆ, ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







