ಕಪ್ಪುಹಣ ಬಿಳಿಯಾಗಿಸಲು ತೆರಳಿದ್ದ ವ್ಯಕ್ತಿಯ ಹತ್ಯೆ
ಶಿವಮೊಗ್ಗ, ಡಿ.20: ಕಪ್ಪು ಹಣವನ್ನು ಬಿಳಿಯಾಗಿಸಲು ಉಡುಪಿ ಜಿಲ್ಲೆಯ ಕಾರ್ಕಳದ ಹಳ್ಳಿಯೊಂದಕ್ಕೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೋರ್ವರನ್ನು ಹೊಡೆದು ಕೊಲೆ ಮಾಡಿ ಹೂತು ಹಾಕಿದ ಘಟನೆ ವರದಿಯಾಗಿದೆ. ಭದ್ರಾವತಿಯ ಮನ್ಸೂರ್‌ಅಲಿ(37) ಕೊಲೆಯಾದವರೆಂದು ಗುರುತಿಸಲಾಗಿದೆ.
ಇವರು ತಮಗೆ ಪರಿಚಯಸ್ಥರಾಗಿದ್ದ ಇಬ್ಬರು ವ್ಯಕ್ತಿಗಳ ಬಳಿಯಿದ್ದ 2ಲಕ್ಷರೂ. ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲು ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮಕ್ಕೆ ತೆರಳಿದ್ದರು. ಮನ್ಸೂರ್ ಅಲಿಯು ತನ್ನೊಂದಿಗೆ ಸ್ನೇಹಿತ ಮುಹಮ್ಮದ್ ಫಯಾಝ್ ಎಂಬಾತನನ್ನು ಕರೆದೊಯ್ದಿದ್ದರು.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆೆ ನಡೆಸುವ ಪ್ರಶಾಂತ್ ಬಲ್ಲಾಳ್ ಎನ್ನುವವನ ಪರಿಚಯ ಫಯಾಝ್‌ಗೆ ಇದ್ದ ಹಿನ್ನೆಲೆಯಲ್ಲಿ ಹಣ ಬಿಳಿ ಮಾಡುವ ವ್ಯವಹಾರಕ್ಕೆ ಈತನನ್ನು ಬಳಸಿಕೊಂಡಿದ್ದ. ಕಾರ್ಕಳದ ಲಾಡ್ಜ್‌ವೊಂದರಲ್ಲಿ ತಂಗಿದ್ದ ಫಯಾಝ್ ಮತ್ತು ಮನ್ಸೂರ್ ಅಲಿಯು, ಪಳ್ಳಿ ಗ್ರಾಮದಲ್ಲಿರುವ ಪ್ರಶಾಂತ್ ಬಲ್ಲಾಳ್ ಮನೆಗೆ ಹಣ ಕಪ್ಪು ಹಣ ಕೊಟ್ಟು ಬಿಳಿ ಹಣ ತರಲು ತೆರಳಿದ್ದರು.
ಈ ಸಂದಭರ್ದಲ್ಲಿ ಪ್ರಶಾಂತ್ ಮತ್ತು ಆತನ ಸಹೋದರ ಪ್ರಮೋದ್ ಬಲ್ಲಾಳ್‌ನು ಮನ್ಸೂರ್ ಅಲಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ತದನಂತರ ಶವವನ್ನು ತಮ್ಮ ಮನೆಯ ಹಿತ್ತಲಲ್ಲಿ ಹೂತು ಹಾಕಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಕಾರ್ಕಳ ಪೊಲೀಸರು ಪ್ರಶಾಂತ್ ಮತ್ತು ಪ್ರಮೋದ್‌ನನ್ನು ಬಂಧಿಸಿ ವಿಚಾರಿಸಿದಾಗ, ಈ ಘಟನೆ ಹಿಂದೆ ಫಯಾಝ್ ಮತ್ತು ಬೆಂಗಳೂರಿನ ವಿನಯ್‌ಗೌಡ ಎನ್ನುವವರು ಇರುವುದು ಬೆಳಕಿಗೆ ಬಂದಿತ್ತು. ನಂತರ ಫಯಾಝ್‌ನನ್ನು ಬಂಧಿಸಲಾಗಿದ್ದು, ವಿನಯ್‌ಗೌಡ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.







