ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ
ಶಿವಮೊಗ್ಗ-ದಾವಣಗೆರೆ ಭಾಗದ ಸಂಸದರ ನಿರಾಸಕ್ತಿ?

ಬಿ. ರೇಣುಕೇಶ್
ಶಿವಮೊಗ್ಗ, ಡಿ. 20: ಮಲೆನಾಡು ಹಾಗೂ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ರೈಲು ಸಂಪರ್ಕ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿರುವ, ಆರ್ಥಿಕಾಭಿವೃದ್ಧ್ದಿಗೆ ಪೂರಕವಾಗಿರುವ ಶಿವಮೊಗ್ಗ-ಹರಿಹರ ರೈಲು ಮಾರ್ಗ ನಿರ್ಮಾಣ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರಾಸಕ್ತಿಯಿಂದ ಅಕ್ಷರಶಃ ನನೆಗುದಿಗೆ ಬಿದ್ದಿದ್ದು, ಸದ್ಯದ ಮಟ್ಟಿಗೆ ಈ ಯೋಜನೆ ಅನುಷ್ಠಾನವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಕೇಂದ್ರ-ರಾಜ್ಯ ಸರಕಾರಗಳು ಶೇ.50-50ರ ವೆಚ್ಚ ಭರಿಸುವ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಮಾರ್ಗ ಹಾದು ಹೋಗುವ ಸ್ಥಳವನ್ನ್ನೂ ಗುರುತಿಸಲಾಗಿದೆ. ಕಳೆದೆರೆಡು ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿಕೊಂಡು ಬರುತ್ತಿದ್ದು, ಪ್ರಸ್ತುತ ಭೂ ಸ್ವಾಧೀನ ಪ್ರಕ್ರಿಯೆ ಹಂತದಲ್ಲಿದೆ. ಆದರೆ ಒಂದೆಡೆ ರಾಜ್ಯ ಸರಕಾರವು ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ನೀಡಲು ಮೀನಮೇಷ ಎಣಿಸುತ್ತಿದೆ.
ಇನ್ನೊಂದೆಡೆ ಕೇಂದ್ರ ರೈಲ್ವೆ ಇಲಾಖೆಯು ತಾನೇ ಘೋಷಿಸಿ ಅನುಮತಿಯಿತ್ತಿರುವ ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬರುತ್ತಿದ್ದು, ತನಗೂ ಈ ಯೋಜನೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಮತ್ತೊಂದೆಡೆ ಶಿವಮೊಗ್ಗ ಹಾಗೂ ದಾವಣಗೆರೆ ಭಾಗದ ಜನಪ್ರತಿನಿಧಿಗಳಿಗೂ ಈ ಯೋಜನೆಯ ಕಾರ್ಯಗತದ ಬಗ್ಗೆ ಮೊದಲಿದ್ದಷ್ಟು ಆಸಕ್ತಿ ಪ್ರಸ್ತುತ ಇಲ್ಲವಾಗಿದೆ. ಈ ಎಲ್ಲ ಕಾರಣಗಳಿಂದ ಮಹತ್ವದ ಯೋಜನೆಯು ನನೆಗುದಿಗೆ ಬಿದ್ದಿದ್ದು, ಕಳೆದ ಹಲವು ವರ್ಷಗಳಿಂದ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಳ್ಳದಂತಾಗಿದೆ. ಈ ಯೋಜನೆಗೆ ಸಂಬಂಧಿಸಿದ ಕಡತಗಳು ಧೂಳು ಹಿಡಿಯುತ್ತಿವೆ.
ಬದಲಾಗಿತ್ತು ಮಾರ್ಗ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಶಿವಮೊಗ್ಗ-ಹರಿಹರ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಅಂದು ಕೇಂದ್ರ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿಯವರಿಗೆ ಮನವಿ ಮಾಡಿದ್ದರು. ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟನ್ನು ರಾಜ್ಯ ಸರಕಾರದ ವತಿಯಿಂದ ಭರಿಸುವುದರ ಜೊತೆಗೆ ಅಗತ್ಯವಾದ ಭೂಮಿಯನ್ನು ಒದಗಿಸಿ ಕೊಡುವುದಾಗಿ ಬಿಎಸ್‌ವೈ ಭರವಸೆ ನೀಡಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿಯವರು ತಾವು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ-ಹರಿಹರ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿ, ಸರ್ವೇಗೆ ಆದೇಶಿಸಿದ್ದರು. ಅಂದು ಶಿವಮೊಗ್ಗ ನಗರದಿಂದ ಹೊಳೆಲೂರು, ಹೊನ್ನಾಳ್ಳಿ ಮಲೇಬೆನ್ನೂರು ಮಾರ್ಗದ ಸರ್ವೇ ನಡೆದು ಇದಕ್ಕೆ ಕೇಂದ್ರ ರೈಲ್ವೆ ಇಲಾಖೆ ಕೂಡ ಅನುಮೋದನೆ ನೀಡಿತ್ತು. ಇನ್ನೇನೂ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊಳಲೂರು ಸುತ್ತಮುತ್ತಲಿನ ಭಾಗದ ನಾಗರಿಕರು ತಮ್ಮ ಭಾಗದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬೀದಿಗಿಳಿದು ಹೋರಾಟ ನಡೆಸಿದ್ದರು. ಇದರಿಂದ ರೈಲ್ವೆ ಇಲಾಖೆಯು ಈ ಮಾರ್ಗ ಕೈಬಿಟ್ಟು ಶಿವಮೊಗ್ಗ ನಗರದ ಸೋಮಿನಕೊಪ್ಪ, ಬಸವಗಂಗೂರು, ಕೊಮ್ಮನಾಳು ಮಾರ್ಗವಾಗಿ ಹರಿಹರಕ್ಕೆ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿತ್ತು.
ಈ ಮಾರ್ಗ ಕಾರ್ಯಸಾಧುವಾಗಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ಅನುಮತಿ ಹಾಗೂ ಅನುದಾನ ಕೂಡ ಬಿಡುಗಡೆಯಾಗಿ ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗಿತ್ತು.
ಗೊಂದಲದಲ್ಲಿ ರೈತ ಸಮುದಾಯ...
ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಜಿಲ್ಲಾಡಳಿತಗಳು ಈಗಾಗಲೇ ಗುರುತಿಸಿವೆ. ಭೂ ಸ್ವಾಧೀನ ಪ್ರಕ್ರಿಯೆ ಕೂಡ ಆರಂಭಿಸಿದ್ದು, ಇದು ಆರಂಭವಾಗಿ ಸರಿಸುಮಾರು ಎರಡು, ಮೂರು ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜಮೀನು ಮಾಲಕರಿಗೆ ದರ ನಿಗದಿಯೂ ಮಾಡಿಲ್ಲ. ಮತ್ತೊಂದೆಡೆ ಈ ಯೋಜನೆ ಅನುಷ್ಠಾನವಾಗಲಿದೆಯೋ? ಇಲ್ಲವೋ? ಎಂಬ ಅನುಮಾನ ಕೂಡ ಕಾಡಲಾರಂಭಿಸಿದೆ. ಇನ್ನೊಂದೆಡೆ ರೈಲು ಮಾರ್ಗ ಹಾದು ಹೋಗಲಿದೆ ಎಂಬ ಕಾರಣದಿಂದ ಸಂಬಂಧಿಸಿದ ಭೂ ಮಾಲಕರು ತಮ್ಮ ಜಮೀನುಗಳ ಪರಭಾರೆ ಮಾಡಲು, ಆಸ್ತಿ ಹಂಚಿಕೆ ಸೇರಿದಂತೆ ಮತ್ತಿತರ ಜಮೀನು ಸಂಬಂಧಿತ ಕೆಲಸ ಕಾರ್ಯ ಮಾಡಿಕೊಳ್ಳಲು ಅಡ್ಡಿಯಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.







