ತನ್ನ ಕುಗ್ರಾಮದ ದುಸ್ಥಿತಿ ಕುರಿತು ಪ್ರಧಾನಿಗೆ ಪತ್ರ ಬರೆದ ವಿದ್ಯಾರ್ಥಿನಿ
ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ ಶಾಲಾ ಬಾಲಕಿಯ ಪತ್ರ !

ಅಝೀರ್ ಕಿರುಗುಂದ
ಚಿಕ್ಕಮಗಳೂರು, ಡಿ.20: ‘ನಮ್ಮ ಊರಲ್ಲಿ ಪ್ರಾಥಮಿಕ ಶಾಲೆ ಇಲ್ಲ. ಹಾಗಾಗಿ ಮಕ್ಕಳು ಅನಿವಾರ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ಹೆತ್ತವರ ಪ್ರೀತಿಯನ್ನು ತೊರೆದು ಶಿಕ್ಷಣಕ್ಕಾಗಿ ಊರು ಬಿಡಬೇಕಾದ ಪರಿಸ್ಥಿತಿ ಇದೆ. ನೀವು ಡಿಜಿಟಲ್ ಇಂಡಿಯಾ ಅಂತೀರಿ, ಆದರೆ, ನಮ್ಮ ಊರಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗೋದೇ ಇಲ್ಲ’ ಎಂದು ವಿದ್ಯಾರ್ಥಿನಿ ಯೋರ್ವಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತನ್ನ ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾಳೆ.
ಪತ್ರಕ್ಕೆ ಸ್ಪಂದಿಸಿದಿಸಿರುವ ಪ್ರಧಾನಿ ಕಾರ್ಯಾ ಲಯದ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‌ನ ಕಚೇರಿಗೆ ಪತ್ರ ಬರೆದು ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಕೋರಿದ್ದಾರೆ.
ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಅಲೆಖಾನ್ ಹೊರಟ್ಟಿ ಎಂಬ ಪುಟ್ಟ ಹಳ್ಳಿಯ ನಿವಾಸಿ ಗೋಪಾಲ್‌ಗೌಡ ಮತ್ತು ಪವಿತ್ರ ದಂಪತಿಯ ಪುತ್ರಿ ನಮನಾ ಜಿ., ಪ್ರಧಾನಿಗೆ ಪತ್ರ ಬರೆದ ವಿದ್ಯಾರ್ಥಿನಿಯಾಗಿದ್ದಾಳೆ. ನೀವು ದೇಶದ ಪ್ರಧಾನಿ ಆದ ಬಳಿಕ ನಿಮ್ಮ ಕೆಲಸ ಕಾರ್ಯಗಳನ್ನು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ ನೋಡಿ ಪ್ರಭಾವಿತಳಾಗಿದ್ದೇನೆ. ಆದ್ದರಿಂದಲೇ ನನ್ನ ಪುಟ್ಟ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸಬೇಕೆಂದು ನಿಮಗೆ ಪತ್ರ ಬರೆಯುತ್ತಿರುವುದಾಗಿ ತಿಳಿಸಿದ್ದಾಳೆ.
‘ನನ್ನ ಊರು ಜಾವಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೇಖಾನ್ ಹೊರಟ್ಟಿ, ಚಿಕ್ಕಮ ಗಳೂರು ಜಿಲ್ಲೆಯ ಗಡಿ ಪ್ರದೇಶದ ಪಶ್ಚಿಮ ಘಟ್ಟದ ತಪ್ಪಲು ಚಾರ್ಮಾಡಿ ಘಾಟ್ ಎಂಬ ಪ್ರದೇಶದಲ್ಲಿ ಇದೆ. ಪ್ರಾಕೃತಿಕವಾಗಿ ಸುಂದರವಾಗಿಯೇ ಇದೆ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದ್ದಾಳೆ.
‘ಊರಿಗೆ ಮುಖ್ಯ ರಸ್ತೆಯಿಂದ ಕಾಡು ರಸ್ತೆಯಾಗಿ ಸುಮಾರು 5-6 ಕಿ.ಮೀ. ಕಾಲ್ನಡಿಗೆಯಾಗಿ ನಡೆದೇ ಹೋಗಬೇಕಾದ ಸ್ಥಿತಿ ಇದ್ದು, ಸಮರ್ಪಕ ರಸ್ತೆ ಕನಸಿನ ಮಾತಾಗಿದೆ’ಎಂದು ಪ್ರಧಾನಿ ಅವರಿಗೆ ತನ್ನ ಗ್ರಾಮವಾಸಿಗಳ ಸಂಕಷ್ಟಗಳನ್ನು ವ್ಯಕ್ತ ಪಡಿಸಿದ್ದಾಳೆ.
ಇಲ್ಲಿನ ಚಿಕ್ಕ-ಪುಟ್ಟ ಮಕ್ಕಳು 4ನೆ ತರಗತಿಯ ಪ್ರಾಥಮಿಕ ಹಂತದ ಶಾಲೆ ಮುಕ್ತಾಯದ ಬಳಿಕ ದೂರದ ವಸತಿ ಶಾಲೆಗಳು ಅಥವಾ ನೆಂಟರ ಮನೆಗಳಲ್ಲಿ ವಸತಿ ಪಡೆದು ಶಾಲೆಗಳಿಗೆ ತೆರಳುವಂತಹ ದುಸ್ಥಿತಿ ಇದೆ. ಇಲ್ಲಿಂದ ಪಟ್ಟಣಕ್ಕೆ, ಪ್ರೋಢಶಾಲೆ ಬಳಿಕ ಕಾಲೇಜುಗಳಿಗೆ ತೆರಳಲು ಕಾಡುರಸ್ತೆಯಾಗಿ ಪ್ರತಿನಿತ್ಯ ಐದಾರು ಕಿ.ಮೀ. ಒಬ್ಬಂಟಿಯಾಗಿ ಸಂಚರಿಸಬೇಕು. ಸಣ್ಣಪುಟ್ಟ ವಸ್ತುಗಳ ಖರೀದಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರಲು ಕೊಟ್ಟಿಗೆಹಾರ ತನಕ ಕಾಲ್ನಡಿಗೆ ಮೂಲಕ ನಡೆಯುವುದು ಅನಿವಾರ್ಯ ಎಂದು ಪತ್ರದಲ್ಲಿ ವಿವರಿಸಿದ್ದಾಳೆ.
ಈ ಸಂಬಂಧ ಎಚ್ಚೆತುಕೊಂಡಿರುವ ಜಿಲ್ಲಾ ಪಂಚಾಯತ್ ಸಿಇಒ ಡಾ.ರಾಗಪ್ರಿಯ ಮತ್ತು ಕಚೇರಿಯ ಅಧಿಕಾರಿಗಳು, ತಕ್ಷಣವೇ ಮೂಡಿಗೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್ ಮತ್ತು ಜಾವಳಿ ಗ್ರಾಪಂ ಪಿಡಿಒ ಜೇಕುಂರನ್ನು ಜಿಪಂ ಕಚೇರಿಗೆ ಕರೆಯಿಸಿ ಹಳ್ಳಿಯ ದಯನೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ವರೆಗೆ ಕತ್ತಲ ಕೂಪವಾಗಿರುವ ಹಳ್ಳಿಯನ್ನು ಅಭಿವೃದ್ಧಿಪಡಿಸುವ ಮಾರ್ಗೋಪಾಯಗಳ ಬಗ್ಗೆತಿಳಿಯಲು ಮಂಗಳವಾರ ಜಿಲ್ಲಾಡಳಿತ ಮತ್ತು ಮೂಡಿಗೆರೆ ತಾಲೂಕು ಆಡಳಿತದ ಹಿರಿಯ ಅಧಿಕಾರಿಗಳು ಅಲೆಖಾನ್ ಹೊರಟ್ಟಿಯತ್ತ ತೆರಳಿದ್ದಾರೆ. ಇನ್ನಾದರೂ ಈ ಹಳ್ಳಿ ಅಧಿಕಾರಿಗಳ ಕಣ್ಣಿಗೆ ಬಿದ್ದು ಅಭಿವೃದ್ಧಿಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಮೂಲಭೂತ ಸೌಲಭ್ಯಗಳ ಕೊರತೆ
ಅಲೆಖಾನ್ ಹೊರಟ್ಟಿ ಎಂಬ ಈ ಕುಗ್ರಾಮಕ್ಕೆ ಡಾಂಬರು ರಸ್ತೆ ಇಲ್ಲ. ಅಂಗನವಾಡಿ ಕೇಂದ್ರವಿಲ್ಲ, ದೂರವಾಣಿ, ಮೊಬೈಲ್ ಸಂಪರ್ಕವಿಲ್ಲ, ವಿದ್ಯುತ್ ಸಂಪರ್ಕವೂ ಇಲ್ಲ. ವಾಹನ ಸಂಪರ್ಕವಂತೂ ಇಲ್ಲವೇ ಇಲ್ಲ. ಅಲ್ಲದೇ ಕುಡಿಯುವ ನೀರು ಸರಬರಾಜು ಕೂಡ ನಡೆಯುವುದಿಲ್ಲ. ಇಲ್ಲಿನ ಜನರು ನೈಸರ್ಗಿ ಕ ನೀರನ್ನು ಬಳಸುತ್ತಾರೆ. ಬೆರಳೆಣಿಕೆಯ ಕೆಲವು ಮನೆಗಳಲ್ಲಿ ಮಾತ್ರವೇ ಸೋಲಾರ್ ದೀಪಗಳು ಉರಿಯುತ್ತವೆ. ಒಂದೆರಡು ಮನೆಗಳಲ್ಲಿ ಮೊಬೈಲ್ ಫೋನ್‌ಗಳು ಇವೆಯಾದರೂ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಯಾವುದೇ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.







