ಬಹು ಕೋಟಿ ರೂ. ತುಂಗಾ ನಾಲೆ ಕಾಮಗಾರಿ ಅಕ್ರಮ: ಆರೋಪ
ಇಂಜಿನಿಯರ್‌ಅಮಾನತಿಗೆ ಸದನ ಸಮಿತಿ ಶಿಫಾರಸು
ಶಿವಮೊಗ್ಗ, ಡಿ. 20: ಕೋಟ್ಯಂತರ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ತುಂಗಾ ನಾಲೆಗಳ ಆಧುನೀಕರಣ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ. ಇದಕ್ಕೆ ಕಾರಣಕರ್ತರಾದ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸೆಕ್ಷನ್ ಆಫೀಸರ್‌ಗಳನ್ನು ಅಮಾನತುಗೊಳಿಸಬೇಕು. ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಬೇಕು.
ಪ್ರಸ್ತುತ ನಡೆಯುತ್ತಿರುವ ಕಳಪೆ ಗುಣಮಟ್ಟದ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಇದು, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದನ ಸಮಿತಿಯು ರಾಜ್ಯ ಸರಕಾರಕ್ಕೆ ಮಾಡಿರುವ ಶಿಫಾರಸುಗಳ ಪ್ರಮುಖಾಂಶಗಳು. ಬಹು ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ತುಂಗಾ ನಾಲೆಗಳ ಆಧುನೀಕರಣ ಕಾಮಗಾರಿಯು ಕಳಪೆಯಾಗಿ ನಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಅಂತಿಮವಾಗಿ ಸದನ ಸಮಿತಿ ರಚನೆ ಮಾಡಿ ಕಾಮಗಾರಿಯ ಗುಣಮಟ್ಟ ತಪಾಸಣೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಇತ್ತೀಚೆಗೆ ಜಿಪಂ. ಸದನ ಸಮಿತಿಯು ತುಂಗಾ ನಾಲೆಯ ಕಾಂಕ್ರಿಟೀಕರಣ ಕಾಮಗಾರಿಯ ಖುದ್ದು ಪರಿಶೀಲನೆ ನಡೆಸಿತ್ತು. ಈ ವೇಳೆ ಹಲವೆಡೆ ಕಾಮಗಾರಿಯು ಕಳಪೆಯಾಗಿ ನಡೆದಿದ್ದು ಸಮಿತಿಯ ಗಮನಕ್ಕೆ ಬಂದಿತ್ತು.
ನಿಯಾಮಾವಳಿಗಳ ಉಲ್ಲಂಘನೆ ಮಾಡಿದ್ದು ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಿತಿಯು ಮೇಲ್ಕಂಡ ಶಿಫಾರಸುಗಳನ್ನು ರಾಜ್ಯ ಸರಕಾರಕ್ಕೆ ಮಾಡಿದೆ. ಕಳಪೆ ಕೆಲಸ: ಮಂಗಳವಾರ ನಗರದಲ್ಲಿ ಸದನ ಸಮಿತಿಯ ಸದಸ್ಯರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಜೆ.ಪಿ.ಯೋಗೇಶ್ ಮಾತನಾಡಿ, ಜಿಪಂ ಸಭೆೆಯಲ್ಲಿ ತೀರ್ಮಾನಿಸಿದಂತೆ ಡಿ.14ರಂದು ಸಮಿತಿಯು ನಾಲಾ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದೆ. ಈ ಸಂದಭರ್ದಲ್ಲಿ ಕಾಮಗಾರಿ ಕಳಪೆಯಾಗಿ ನಡೆದಿರುವುದು ಬೆಳಕಿಗೆ ಬಂದಿದೆ. ಗಾಜನೂರು ಉಪವಿಭಾಗ ವ್ಯಾಪ್ತಿಯ 2ನೆಯ ಕಿ.ಮೀ. ನ ಚೈನೇಜ್ 2010 ರಲ್ಲಿ ನಿರ್ಮಿಸಿದ ನಾಲಾ ಲೈನಿಂಗ್ ಕಾಮಗಾರಿ ಹಾಗೂ ನಾಲೆಯ ತಳಭಾಗಕ್ಕೆ ಹಾಕಿರುವ ಕಾಂಕ್ರಿಟ್ ಕಾಮಗಾರಿಗಳ ಅನುಷ್ಠಾನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ನಾಲೆಯ ಲೈನಿಂಗ್ ಕಾಮಗಾರಿಗೆ ಹಾಗೂ ತಳ ಭಾಗಕ್ಕೆ ಅಂದಾಜು ಪಟ್ಟಿಯಲ್ಲಿ ನಮೂದಿಸಿದ ಪ್ರಮಾಣದಲ್ಲಿ ಕಾಂಕ್ರಿಟ್ ಬಳಸದಿರುವುದು ಕಂಡುಬಂದಿದೆ. ಹಾಗೆಯೇ ಕಾಂಕ್ರಿಟ್ ಲೈನಿಂಗ್ ಕುಸಿದು ಬಿದ್ದಿದೆ. ಇನ್ನೂ ಕೆಲವೆಡೆ ಲೈನಿಂಗ್ ಬಿರುಕು ಬಿಟ್ಟಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಪಂ ಸದನ ಸಮಿತಿಯು ಶೀಘ್ರದಲ್ಲಿ ಗೊಂದಿ ನಾಲಾ ದುರಸ್ತಿ ಕಾಮಗಾರಿಯ ಪರಿಶೀಲನೆ ನಡೆಸಲಿದೆ. ನಂತರ ಈ ಎರಡೂ ಅವ್ಯವಹಾರಗಳ ಕುರಿತು ಸಮಗ್ರ ವರದಿ ರೂಪಿಸಿ ಜಿಪಂ ಸಭೆೆ ಕರೆದು ಅಲ್ಲಿ ಮಂಡಿಸಲಾಗುವುದು. ನಂತರ ಮುಂದಿನ ಕ್ರಮದ ಬಗ್ಗೆ ಸರಕಾರಕ್ಕೆ ಹಾಗೂ ನೀರಾವರಿ ನಿಗಮಕ್ಕೆ ವರದಿ ಸಲ್ಲಿಸಲಾಗುವುದು.
ಜೆ.ಪಿ.ಯೋಗೇಶ್, ಸಮಿತಿ ಸದಸ್ಯ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಅಲ್ಲಿನ ರೈತರು ಇದನ್ನು ದೃಢಪಡಿಸಿದ್ದಾರೆ. ಮಣ್ಣನ್ನು ಬಿಗಿ ಮಾಡದೆ ಮೇಲಿಂದ ಕಾಂಕ್ರಿಟ್ ಹಾಕಿರುವುದರಿಂದ ಕುಸಿದು ಬಿದ್ದಿದೆ. ಜೊತೆಗೆ ಬಿಗಿ ಮಣ್ಣನ್ನು ಇಲ್ಲಿ ಬಳಸಿಲ್ಲ. ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಲಾಗುವುದು.
ಕಲಗೋಡು ರತ್ನಾಕರ, ಸಮಿತಿಯ ಸದಸ್ಯ ನಾಲಾ ಕಾಮಗಾರಿ ಕಳಪೆಯಾಗಿ ನಡೆಯುತ್ತಿರುವ ಬಗ್ಗೆ ಒಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. 135 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಈಗಾಗಲೇ 12.50 ಕೋಟಿ ರೂ. ಬಿಡುಗಡೆಯಾಗಿದೆ. ಎಂಎಲ್ಸಿ ಆರ್.ಪ್ರಸನ್ನಕುಮಾರ್ ಕಳೆದ ಜುಲೈನಲ್ಲಿ ಕಳಪೆ ಕಾಮಗಾರಿ ನಿಮಿತ್ತ ಹಣ ಬಿಡುಗಡೆಮಾಡ ಬೇಡಿ ಎಂದು ಪತ್ರ ಬರೆದಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಕೆ.ಇ.ಕಾಂತೇಶ್ ಸಮಿತಿಯ ಸದಸ್ಯ







