ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರಿಗೆ ಎಟಿಎಂ ಅಲಭ್ಯ: ಗ್ರಾಮಸ್ಥರ ಪರದಾಟ

ಮೂಡಿಗೆರೆ, ಡಿ.20: ದೇಶದಾದ್ಯಂತ ಹೊಸ ನೋಟುಗಳ ಚಲಾವಣೆ ವಿಳಂಬ ವಾಗುತ್ತಿದ್ದಂತೆ ಕೆಲವು ತಿಂಗಳಿನಿಂದ ಬಹುತೇಕ ಎಲ್ಲ ಬ್ಯಾಂಕುಗಳ ಎಟಿಎಂ ವ್ಯವಸ್ಥೆ ಗ್ರಾಹಕರಿಗೆ ಸಿಗುತ್ತಿಲ್ಲ. ಬ್ಯಾಂಕುಗಳ ಎಟಿಎಂಗಳು ಇತ್ತೀಚಿನ ದಿನಗಳಲ್ಲಿ ಕಾರ್ಯಾರಂಭ ಮಾಡುತ್ತಿದ್ದರೆ ಮೂಡಿಗೆರೆ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಮತ್ತು ಗ್ರಾಮೀಣ ಭಾಗದ ಕರ್ಣಾಟಕ ಬ್ಯಾಂಕ್ ಎಟಿಎಂಗಳು ಕೆಲವು ದಿನಗಳಿಂದ ತೆರೆಯದ ಪರಿಣಾಮ ಗ್ರಾಮಸ್ಥರನ್ನು ಕಂಗಾಲಾಗುವಂತೆ ಮಾಡಿದೆ.
ಮಲೆನಾಡು ಭಾಗದ ಮೂಡಿಗೆರೆ, ಬಣಕಲ್,ಆಲ್ದೂರು, ಕಳಸ ಮುಂತಾದ ಕರ್ಣಾಟಕ ಬ್ಯಾಂಕ್ ಶಾಖೆಗಳ ಎಟಿಎಂಗಳು ಈವರೆಗೂ ತೆರೆಯದೇ ಜನರು ಹಣಕ್ಕಾಗಿ 30ಕಿ.ಮೀ. ದೂರ ಮೂಡಿಗೆರೆಯ ಇತರ ಬ್ಯಾಂಕ್‌ಗಳ ಎಟಿಎಂಗಳಿಗೆ ಎಡತಾಕುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಕರ್ಣಾಟಕ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಸಚಿನ್ ಮಾಹಿತಿ ನೀಡಿ ಕರ್ಣಾಟಕ ಬ್ಯಾಂಕ್‌ನ ಎಲ್ಲ ಬ್ಯಾಂಕಿನ ಶಾಖೆಗಳು ಎಟಿಎಂ ಯಂತ್ರದಲ್ಲಿ ಹೊಸ ನೋಟಿನ ಮಾರ್ಪಾಡು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿಗದಿತ ಬ್ಯಾಂಕಿನಿಂದ ಹೊಸ ನೋಟುಗಳ ಸರಬರಾಜು ಆಗಿಲ್ಲ.
ಈ ವಾರದಲ್ಲಿ ಹಣ ಸರಬರಾಜು ಆಗುವ ನಿರೀಕ್ಷೆ ಇದೆ.ಬ್ಯಾಂಕ್ ವ್ಯವಹಾರಗಳಲ್ಲಿ ಏನೂ ಅಡಚಣೆಯಾಗಿಲ್ಲ. ದಿನಕ್ಕೆ 24 ಸಾವಿರ ರೂ. ಹಣ ಗ್ರಾಹಕರಿಗೆ ನೀಡಲಾಗುತ್ತಿದೆ. ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಜನವರಿ ಮೊದಲ ವಾರದಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಎಟಿಎಂ ಗಳು ಕಾರ್ಯಾರಂಭ ಮಾಡಲಿವೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಹಕರ ಅನುಕೂಲಕ್ಕಾಗಿ ಎಟಿಎಂ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಬ್ಯಾಂಕ್ ಗ್ರಾಹಕರ ಒತ್ತಾಯವಾಗಿದೆ.







