ಸಹಕಾರಿ ಬ್ಯಾಂಕ್‌ನಿಂದ ರೈತರಿಗೆ 3.50 ಕೋಟಿ ರೂ. ಸಾಲ ವಿತರಣೆ: ಕಲ್ಲೇಶಪ್ಪ

ಕಡೂರು, ಡಿ.20: ತಾಲೂಕಿನಾದ್ಯಂತ ರೈತರಿಗಾಗಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕಿಗೆ ಸುಮಾರು 3.50 ಕೋಟಿ ರೂ. ನಬಾರ್ಡ್‌ನಿಂದ ಬಂದಿದ್ದು, ಇದರಲ್ಲಿ ಸಾಮಾನ್ಯ ವರ್ಗದ ರೈತನಿಗೆ 2.65 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ. ಸುಮಾರು 171 ಜನ ಫಲಾನುಭವಿಗಳು ಸಾಲವನ್ನು ಪಡೆದುಕೊಂಡಿರುತ್ತಾರೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಸಿ.ಎಂ. ಕಲ್ಲೇಶಪ್ಪ ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿ ಮಾತನಾಡಿ, ತೋಟದ ಅಭಿವೃದ್ಧಿ, ತಂತಿಬೇಲಿ ಅಳವಡಿಸಲು ಹನಿ ನೀರಾವರಿ ಹಾಗೂ ಟ್ರ್ಯಾಕ್ಟರ್ ಕೊಳ್ಳಲು ಸಾಲ ನೀಡಲಾಗಿದೆ. ಪರಿಶಿಷ್ಟ ಪಂಗಡದವರಿಗೆ 16%, ಪರಿಶಿಷ್ಟ ವರ್ಗದ ಜನಾಂಗದವರಿಗೆ 6% ಸಾಲ ನೀಡಲಾಗಿದೆ. ಪರಿಶಿಷ್ಟ ಜನಾಂಗಕ್ಕೆ 84.35 ಲಕ್ಷ ರೂ. ಹಾಗೂ ಪರಿಶಿಷ್ಟ ಪಂಗಡದವರಿಗೆ 32 ಲಕ್ಷ ರೂ. ಮಂಜೂರಾತಿ ನೀಡಿ ಸಾಲ ನೀಡಲಾಗಿದೆ. ಇನ್ನೂ ಹೆಚ್ಚುವರಿಯಾಗಿ 43ಲಕ್ಷ ರೂ. ಹಾಗೂ 16ಲಕ್ಷ ರೂ. ವರೆಗೆ ಮಂಜೂರಾತಿಗಾಗಿ ಕಳುಹಿಸಲಾಗಿದೆ. ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ 23 ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 31ರ 2015ರಿಂದ ಬ್ಯಾಂಕಿಗೆ ಸುಸ್ತಿದಾರರಾಗಿರುವ ರೈತರಿಗೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಿ ಅಸಲು ಹಣವನ್ನು ಮಾತ್ರ ರೈತರಿಂದ ಕಟ್ಟಿಸಿಕೊಳ್ಳಲಾಗುತ್ತಿದ್ದು, ಇದರ ಅವಧಿ 2017ರ ಮಾರ್ಚ್ 31ರವರೆಗೆ ಗಡುವು ನೀಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಸಂಪೂರ್ಣ ಬಡ್ಡಿ ಮನ್ನಾ ಯೋಜನೆಯಡಿಯಲ್ಲಿ ಇದುವರೆಗೂ ರೈತರಿಂದ 1.84 ಕೋಟಿ ರೂ. ವಸೂಲಾತಿಯಾಗಿದ್ದು, ಬಡ್ಡಿ ಮನ್ನಾ ಮಾಡಿರುವ ಹಣದ ಬಾಬ್ತು ಸರಕಾರದಿಂದ ನಮ್ಮ ಬ್ಯಾಂಕಿಗೆ 1.56 ಕೋಟಿ ರೂ. ಬರಬೇಕಿದೆ. ನಿಗದಿತ ಅವಧಿಗೆ ಸಾಲ ಮರುಪಾವತಿ ಮಾಡುವುದರ ಮೂಲಕ ಹೊಸ ಸಾಲವನ್ನು ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ದೇವಿರಮ್ಮ, ನಿರ್ದೇಶಕ ಕೆ.ಎಚ್. ರಂಗನಾಥ್, ಎಚ್.ಎಂ.ರೇವಣ್ಣಯ್ಯ,ಪುಷ್ಪಲತಾ ಸೋಮೇಶ್,ಕೆ.ಎನ್. ರವಿಕುಮಾರ್, ಕೃಷ್ಣಾನಾಯ್ಕ, ಗೋವಿಂದಪ್ಪ,ಎಸ್. ವಿರೂಪಾಕ್ಷಪ್ಪ,ಎಂ.ಎನ್. ನಟರಾಜ್,ಮೋಹನ್‌ಕುಮಾರ್,ನಾಗಪ್ಪ,ಮಲ್ಲಪ್ಪ,ವ್ಯವಸ್ಥಾಪಕರಾದ ಎಸ್.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.







