ದಲಿತ ಸಂಘರ್ಷ ಸಮಿತಿ ಖಂಡನೆ
ಮಡಿಕೇರಿ, ಡಿ.20: ದಿಡ್ಡಳ್ಳಿಯಲ್ಲಿ ಗಿರಿಜನರ ವಿರುದ್ಧ ಅರಣ್ಯ ಇಲಾಖೆ ನಡೆಸಿರುವ ಅಮಾನವೀಯ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಿರಾಶ್ರಿತರ ಎಲ್ಲ ಹೋರಾಟಗಳಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಅರಣ್ಯ ಅಧಿಕಾರಿಗಳು ತಾವು ನಡೆಸುತ್ತಿರುವ ಅಕ್ರಮಗಳನ್ನು ಮುಚ್ಚಿ ಹಾಕುವುದಕ್ಕಾಗಿ ಗಿರಿಜನರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂದಿಗೂ ಕೊಡಗು ಜಿಲ್ಲೆಯಲ್ಲಿ ಜೀತದಾಳು ಪದ್ಧ್ದತಿ ಚಾಲ್ತಿಯಲ್ಲಿದ್ದು, ಗಿರಿಜನರನ್ನು ಲೈನ್‌ಮನೆ ಎಂಬ ಕಾರಾಗೃಹ ದಲ್ಲಿಟ್ಟು ದುಡಿಸಿಕೊಳ್ಳುತ್ತಿದ್ದಾರೆಯೇ ಹೊರತು ಕನಿಷ್ಠ ವೇತನ ನೀಡುತ್ತಿಲ್ಲ. ಇಂದಿಗೂ ದಲಿತ ಕಾಲನಿ ಹಾಗೂ ಗಿರಿಜನ ಹಾಡಿಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ಮಾತನಾಡಿ, ದಲಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಾಟಾಚಾರದ ಸಭೆಗಳನ್ನು ನಡೆಸುತ್ತಿದ್ದು, ಕಳೆದ 25 ವರ್ಷಗಳಿಂದ ಯಾವುದೇ ಭರವಸೆಗಳು ಈಡೇರಿಲ್ಲವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಗ್ಗೋಡು ಗ್ರಾಮ ಸಂಚಾಲಕ ದೀಪಕ್ ಉಪಸ್ಥಿತರಿದ್ದರು.







