ಅರಣ್ಯ ಅಧಿಕಾರಿಗಳ ಅಮಾನತಿಗೆ ಒತ್ತಾಯ
ಮಡಿಕೇರಿ, ಡಿ.20: ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಪಾಲು ಮಾಡಲು ಕಾರಣಕರ್ತರಾದ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ, ವೆಲ್ಫೇರ್ ಫಾರ್ಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘರ್ಷ ಸಮಿತಿ ಆದಿವಾಸಿ ಮಹಾಸಭಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಪಕ್ಷದ ಮುಖಂಡ ಕೆ.ವಿ. ಸುನೀಲ್, ದಿಡ್ಡಳ್ಳಿ ಪ್ರಕರಣವನ್ನು ಖಂಡಿಸಿದರು. ಜಿಲ್ಲೆೆಯಲ್ಲಿ ನಿರಾಶ್ರಿತರ ಸಂಖ್ಯೆ ಬೆರಳೆಣಿಕೆಯಷ್ಟು ಇದೆಯೆಂದು ಅಧಿಕಾರಿಗಳು ಸುಳ್ಳು ವರದಿಯನ್ನು ನೀಡುತ್ತಿದ್ದಾರೆ. ಜಿಲ್ಲೆಯ ಶಾಸಕರಾದಿಯಾಗಿ ಬಹುತೇಕ ಎಲ್ಲ್ಲ ಜನಪ್ರತಿನಿಧಿಗಳು ಬಿಜೆಪಿಯವರಾಗಿದ್ದು, ದುರ್ಬಲ ವರ್ಗ ಆದಿವಾಸಿ ಸಮುದಾಯದ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ. ಜಿಲ್ಲಾಡಳಿತ ಸರಕಾರಕ್ಕೆ ಸುಳ್ಳು ಮಾಹಿತಿಯನ್ನು ನೀಡುತ್ತಿರುವುದರಿಂದಲೇ ಗಿರಿಜನರು ನಿರಾಶ್ರಿತರಾಗುತ್ತಿರುವುದೆಂದು ಆರೋಪಿಸಿದರು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯದರ್ಶಿ ಕೆ.ಟಿ. ಬಶೀರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಪಕ್ಷದ ಮುಖಂಡ ಎಂ.ಎಚ್. ನವಲಗುಂದ, ಸಹ ಸಂಚಾಲಕ ಬಿ.ಆರ್. ರಜನೀಕಾಂತ್ ಹಾಗೂ ಆದಿವಾಸಿ ಮಹಾಸಭಾದ ಪ್ರಮುಖ ಪಿ.ಎನ್. ಮುತ್ತ ಉಪಸ್ಥಿತರಿದ್ದರು.





