ಮೋದಿಯ ಉತ್ತರದ ನಿರೀಕ್ಷೆಯಲ್ಲಿ ಜನತೆ
ಒಂದು ದೇಶದ ಅರ್ಥವ್ಯವಸ್ಥೆಯ ಸಂರಚನೆ ಅತ್ಯಂತ ಸೂಕ್ಷ್ಮನೆಯ್ಗೆಯಿಂದ ಹೆಣೆದಿರುತ್ತದೆ. ಅದರ ಒಂದು ಹೊಲಿಗೆಯನ್ನು ನಾವು ಎಳೆದರೆ ಎಲ್ಲವೂ ಒಂದೊಂದಾಗಿ ಕಳಚಿಕೊಳ್ಳುವುದಕ್ಕೆ ಶುರು ಹಚ್ಚುತ್ತದೆ. ಆದುದರಿಂದಲೇ, ಅದನ್ನು ಮುಟ್ಟಲು ಸಾಕಷ್ಟು ಪೂರ್ವತಯಾರಿ ಇರಬೇಕಾಗುತ್ತದೆ. ಮುಖ್ಯವಾಗಿ ಅಂತಹದೊಂದು ಬದಲಾವಣೆಯ ನೇತೃತ್ವ ವಹಿಸಿರುವ ಪ್ರಧಾನಿ ಸಾಕಷ್ಟು ಅರ್ಥಶಾಸ್ತ್ರಜ್ಞರ ಜೊತೆಗೆ ಚರ್ಚೆ ನಡೆಸಬೇಕಾಗುತ್ತದೆ. ಅದರ ಪರಿಣಾಮಗಳ ಬೇರೆ ಬೇರೆ ಮುಖಗಳನ್ನು ಅರಿತುಕೊಂಡು ಹೆಜ್ಜೆಯಿಡಬೇಕಾಗುತ್ತದೆ. ಆದರೆ ದೇಶವೆಂದರೆ ಅಂಬಾನಿ, ಅದಾನಿ ಎಂದಷ್ಟೇ ನಂಬಿಕೊಂಡಿರುವ ಪ್ರಧಾನಿಯೊಬ್ಬ ಅರ್ಥವ್ಯವಸ್ಥೆಯ ಸೂಕ್ಷ್ಮ ನೆಯ್ಗೆಯನ್ನು ಎಳೆದರೆ ಅದರ ದುಷ್ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎನ್ನುವುದಕ್ಕೆ ಭಾರತ ಸಾಕ್ಷಿಯಾಗಿದೆ. ಐನೂರು ಮತ್ತು ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರ ಇದೀಗ ದೇಶವನ್ನು ಆರ್ಥಿಕ ಅರಾಜಕತೆಯ ಕಡೆಗೆ ಮುನ್ನಡೆಸುತ್ತಿದೆ. ‘ದೇಶಕ್ಕೆ ಒಳ್ಳೆಯದಾಗುತ್ತದೆ’ ಎನ್ನುವುದನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ, ತನ್ನ ಭಕ್ತರ ಮೂಲಕ ನಂಬಿಸಲು ನರೇಂದ್ರ ಮೋದಿ ಶತ ಪ್ರಯತ್ನ ಮಾಡುತ್ತಿರುವರಾದರೂ, ಆ ಪ್ರಯತ್ನಗಳು ವಾಸ್ತವದ ಮುಂದೆ ನಿಸ್ತೇಜವಾಗತೊಡಗಿದೆ. ಬರೇ 50 ದಿನ ಕೊಡಿ ಎಂದು ಕೇಳುತ್ತಿದ್ದ ಪ್ರಧಾನಿಯ ಮುಂದೆ ಡಿಸೆಂಬರ್ 31 ನೆತ್ತಿಯ ಮೇಲೆ ತೂಗುತ್ತಿರುವ ಕತ್ತಿಯಾಗಿ ಪರಿಣಮಿಸಿದೆ. ಆ ದಿನವನ್ನು ಎದುರಿಸಲು ಬೇರೆ ಬೇರೆ ವೇಷಗಳನ್ನು ಹಾಕುವ ಪ್ರಯತ್ನದಲ್ಲಿದ್ದಾರೆ ನರೇಂದ್ರ ಮೋದಿ ಮತ್ತು ಅವರ ಬಳಗ. ಆದರೆ ಜನರ ಸಮಸ್ಯೆಗಳಿಗೆ ನೇರ ಪರಿಹಾರವನ್ನು ಹೇಳುವಲ್ಲಿ ಮಾತ್ರ ವಿಫಲವಾಗುತ್ತಿದ್ದಾರೆ.
ನೋಟು ನಿಷೇಧವನ್ನು ಘೋಷಿಸಿದ ದಿನದಿಂದ ನರೇಂದ್ರ ಮೋದಿಯವರ ಅಥವಾ ಕೇಂದ್ರ ಸರಕಾರದ ಹೇಳಿಕೆಗಳಲ್ಲಿರುವ ವಿರೋಧಾಭಾಸಗಳೇ ಆ ಘೋಷಣೆಯ ವೈಫಲ್ಯವನ್ನು ಸಾರಿ ಹೇಳುತ್ತಿದೆ. ಆರಂಭದಲ್ಲಿ ಎರಡು ವಾರಗಳನ್ನು ನೀಡುವಂತೆ ಸರಕಾರ ಘೋಷಿಸಿತು. ಬಳಿಕ ಅದು ಐವತ್ತು ದಿನಗಳಿಗೆ ಮುಂದುವರಿಯಿತು. ಈ ಅವಧಿಯಲ್ಲೂ ತನ್ನದೇ ನೀತಿಯಲ್ಲಿ ಬದಲಾವಣೆಗಳನ್ನು ತರುತ್ತಲೇ ಹೋಯಿತು. ತಮ್ಮ ಹಳೆ ನೋಟುಗಳನ್ನು ಸುಲಭವಾಗಿ ಡಿಸೆಂಬರ್ 30ರೊಳಗೆ ಬದಲಿಸಬಹುದು ಎನ್ನುವ ಘೋಷಣೆಯನ್ನು ಸರಕಾರ ಮಾಡಿತು. ಆದರೆ ಈ ಬದಲಾವಣೆ ಅಷ್ಟು ಸುಲಭವಿಲ್ಲ ಎನ್ನುವುದು ಮನವರಿಕೆಯಾಗುತ್ತಿರುವಂತೆಯೇ ನೋಟು ಬದಲಾವಣೆಯ ಪ್ರಮಾಣಕ್ಕೂ ಮಿತಿ ಹೇರಿತು. ಅಂತಿಮವಾಗಿ ಬದಲಾವಣೆಯನ್ನೇ ನಿಲ್ಲಿಸಿತು. ನೇರವಾಗಿ ಠೇವಣಿಯಾಗಿಯಷ್ಟೇ ಹಳೆ ನೋಟುಗಳನ್ನು ಡಿಸೆಂಬರ್ 30ರೊಳಗೆ ಹಾಕಬಹುದು ಎಂದು ಹೇಳಿತು. ಜನರು ಎಲ್ಲ ಸಂಕಟಗಳನ್ನು ಅದುಮಿಟ್ಟು ಮೋದಿಯ ಮಾತುಗಳನ್ನು ಪಾಲಿಸತೊಡಗಿದರು. ಈ ನಡುವೆ ಸುಮಾರು 90ಕ್ಕೂ ಅಧಿಕ ಮಂದಿ ನೋಟು ಬದಲಾವಣೆಯ ಸಂದರ್ಭದಲ್ಲಿ ಮೃತಪಟ್ಟರು. ರೈತರು, ಕಾರ್ಮಿಕರು ಬ್ಯಾಂಕಿನ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನಿಸಿದರು. ಇಬ್ಬರು ನಿವೃತ್ತ ಸೈನಿಕರು ಸೂಕ್ತ ಸಂದರ್ಭದಲ್ಲಿ ಹಣ ದೊರಕದ ಕಾರಣ ಪ್ರಾಣ ಕಳೆದುಕೊಂಡರು. ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ್ದ ಓರ್ವ ನಿವೃತ್ತ ಯೋಧ, ಬ್ಯಾಂಕಿನ ಸಾಲಿನಲ್ಲಿ ನಿಲ್ಲಲಾಗದೆ ಸಾರ್ವಜನಿಕವಾಗಿ ಕಣ್ಣೀರಿಟ್ಟಿರುವುದು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೊಳಗಾಯಿತು. ಹಲವು ಬ್ಯಾಂಕುಗಳನ್ನೇ ಸಾರ್ವಜನಿಕರು ಧ್ವಂಸಗೊಳಿಸಿದರು. ದೇಶದ ಸಹಸ್ರಾರು ಕಾರ್ಮಿಕರು ಕೆಲಸವಿಲ್ಲದೆ ಇತ್ತ ಕೈಯಲ್ಲಿ ಹಣವೂ ಇಲ್ಲದೆ ಅರೆಹೊಟ್ಟೆಯಲ್ಲಿ ಕಳೆಯುತ್ತಿದ್ದಾರೆ.
ಮಾಧ್ಯಮಗಳು ಇವುಗಳ ಬಗ್ಗೆ ಸಂಪೂರ್ಣ ಕುರುಡಾಗಿದೆಯಾದರೂ ಸಾಮಾಜಿಕ ತಾಣಗಳ ಮೂಲಕ ದೇಶದ ಸಂಕಟ ಬಯಲಾಗುತ್ತಿವೆ. ಸರಕಾರದ ಎಂಜಲು ಕಾಸು ಪಡೆದು ವಾಸ್ತವವನ್ನು ಮಾಧ್ಯಮಗಳು ಮುಚ್ಚಿಟ್ಟಿರುವ ಹೊತ್ತಿಗೆ ಸಾಮಾಜಿಕ ತಾಣಗಳು ಪರ್ಯಾಯ ಮಾಧ್ಯಮವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ನರೇಂದ್ರ ಮೋದಿಯವರು ನೀಡಿದ 50 ದಿನ ಮುಗಿಯಲು ಇನ್ನು ಕೇವಲ ಹತ್ತು ದಿನಗಳಿವೆ. ಈ ಸಂದರ್ಭದಲ್ಲಿ ಯಾವುದೇ ಅವಸರವಿಲ್ಲದೆ, ಸಹನೆಯಿಂದ, ತಾಳ್ಮೆಯಿಂದ ಹಳೆ ನೋಟುಗಳನ್ನು ಹೊಸ ನೋಟುಗಳಾಗಿ ಬದಲಾಯಿಸಿ ಅಥವಾ ಹಳೆ ನೋಟುಗಳನ್ನು ನಿಮ್ಮ ಖಾತೆಗಳಲ್ಲಿ ಠೇವಣಿಯಾಗಿರಿಸಿ ಎಂದು ಹೇಳಿರುವುದು ನರೇಂದ್ರ ಮೋದಿಯವರೇ ಆಗಿದ್ದಾರೆ. ವಿಪರ್ಯಾಸವೆಂದರೆ, ಸೋಮವಾರ ಸರಕಾರ ತಾನೇ ನೀಡಿದ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿತು.
5 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವುದಾದರೆ ಇಷ್ಟರವರೆಗೆ ಯಾಕೆ ಠೇವಣಿ ಮಾಡಿಲ್ಲ ಎನ್ನುವುದರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿತು. ‘ಡಿಸೆಂಬರ್ 30ರೊಳಗೆ ನಿಮ್ಮ ಹಳೆ ನೋಟುಗಳನ್ನು ಬ್ಯಾಂಕುಗಳಿಗೆ ಪಾವತಿಸಿ’ ಎಂದು ಪ್ರಧಾನಿಯೇ ಹೇಳಿದ ಮೇಲೆ, ಇದೀಗ ‘ನಿಮ್ಮ ನೋಟುಗಳನ್ನು ಈವರೆಗೆ ಯಾಕೆ ಠೇವಣಿ ಇಡಲಿಲ್ಲ?’ ಎಂದು ಕೇಳುವುದು ಉಡಾಫೆಯ ಪರಮಾವಧಿಯಲ್ಲವೇ?. ಡಿಸೆಂಬರ್ 15ರವರೆಗೆ ನೋಟುಗಳನ್ನು ಕೆಲವು ಕ್ಷೇತ್ರಗಳಲ್ಲಿ ಬಳಸುವ ಅವಕಾಶವನ್ನೂ ಸರಕಾರವೇ ನೀಡಿತ್ತು. ಹೀಗಿರುವಾಗ, ಅತ್ಯಾತುರದಿಂದ ಜಮೆ ಮಾಡುವ ಅಗತ್ಯವಾದರೂ ಏನಿದೆ? ಒಂದೆಡೆ ನೋಟನ್ನು ಬದಲಾಯಿಸಲು 30ರವರೆಗೆ ಅವಕಾಶಗಳನ್ನು ಸರಕಾರವೇ ನೀಡಿತು. ಜೊತೆಗೆ ಕೆಲವು ಸೀಮಿತ ಕ್ಷೇತ್ರಗಳಲ್ಲಿ ನೋಟನ್ನು ಬಳಸುವ ಅವಕಾಶವನ್ನೂ ಸರಕಾರವೇ ಕೊಟ್ಟಿತು. ಈಗ ಅದೇ ಸರಕಾರ ಕೇಳುತ್ತಿದೆ ‘‘ನೀವು ಈವರೆಗೆ ಯಾಕೆ ಠೇವಣಿ ಮಾಡಿಲ್ಲ?’’ ತಲೆಗೆಟ್ಟ ಸರಕಾರವಷ್ಟೇ ಇಂತಹದೊಂದು ಪ್ರಶ್ನೆಯನ್ನು ತನ್ನ ಜನರಿಗೆ ಕೇಳಬಹುದು. ಬಹುಶಃ ನೋಟು ನಿಷೇಧದ ದುಷ್ಪರಿಣಾಮಗಳಿಂದ ಸರಕಾರದ ತಲೆಯೇ ಭಾಗಶಃ ಕೆಟ್ಟು ಹೋಗಿದೆ. ಸರಿ, ಇಂತಹದೊಂದು ಆದೇಶ ಹೊರ ಬಿದ್ದ ಮರುದಿನವೇ ವಿತ್ತ ಸಚಿವರು, 5,000 ರೂಪಾಯಿಗಿಂತ ಹೆಚ್ಚು ಠೇವಣಿಯನ್ನು ಒಮ್ಮೆಲೇ ಪಾವತಿಸಬೇಕಾದರೆ ವಿವರಣೆ ಅಥವಾ ಸ್ಪಷ್ಟೀಕರಣದ ಅಗತ್ಯವಿಲ್ಲ ಎಂದಿದ್ದಾರೆ. ಅಂದರೆ ತಮ್ಮ ಅವಿವೇಕ ಅವರಿಗೆ ತಡವಾಗಿ ಮನವರಿಕೆಯಾಗಿದೆ. ಇಂತಹ ಗೊಂದಲಗಳ ಹೇಳಿಕೆಗಳು, ಆದೇಶಗಳು ಜನರಲ್ಲಿ ಸರಕಾರದ ನಿರ್ಧಾರಗಳ ಕುರಿತ ಭರವಸೆಗಳು ಹೊರಟು ಹೋಗುತ್ತದೆ ಎಂಬ ಅರಿವೂ ಇದ್ದಂತಿಲ್ಲ. ಒಮ್ಮೆ ಈ ವಿಷಯದಲ್ಲಿ ಜನರು ಭರವಸೆಯನ್ನು ಕಳೆದುಕೊಂಡರೆ, ಬ್ಯಾಂಕಿನ ಮುಂದೆ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಅಂತಿಮವಾಗಿ ನೋಟು ನಿಷೇಧದ ನಿಜವಾದ ಉದ್ದೇಶ ಏನು ಎನ್ನುವುದು ಮೋದಿಯವರಿಗೆ ಮನದಟ್ಟಾಗುತ್ತಿಲ್ಲ. ಭಯೋತ್ಪಾದನೆಯನ್ನು ನಿಗ್ರಹಿಸಬಹುದು, ಕಪ್ಪುಹಣವನ್ನು ತಡೆಗಟ್ಟಬಹುದು ಎಂದು ಮೋದಿ ಹೇಳಿದರು. ಆದರೆ ಇವರೆಡರಲ್ಲೂ ಸರಕಾರ ವಿಫಲವಾಗಿದೆ. ನೋಟು ನಿಷೇಧದ ಬಳಿಕ ಉಗ್ರರು ನಮ್ಮ ಸೈನಿಕರ ಮೇಲೆ ನಡೆಸುತ್ತಿರುವ ದಾಳಿ ಹೆಚ್ಚಾಗಿದೆ. ಹಾಗೆಯೇ ಹೊಸ ನೋಟುಗಳೇ ಭಾರೀ ಪ್ರಮಾಣದಲ್ಲಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಬಳಿ ಪತ್ತೆಯಾಗುತ್ತಿದೆ. ಅಂದರೆ, ಕಪ್ಪು ಹಣ ಅತಿ ವೇಗದಲ್ಲಿ ಸಂಗ್ರಹವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಲಕ್ಷಾಂತರ ಕೋಟಿ ಅವ್ಯವಹಾರ ನಡೆದಿರುವುದರ ಕುರಿತಂತೆ ಈಗಾಗಲೇ ಹಲವು ನಾಯಕರು ಆರೋಪ ಮಾಡಿದ್ದಾರೆ. ಮೋದಿಯ ಆಪ್ತ ಬಾಬಾ ರಾಮ್‌ದೇವ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಅಂದರೆ ಭ್ರಷ್ಟಾಚಾರವನ್ನು ತಡೆಯುವಲ್ಲಿಯೂ ನೋಟು ನಿಷೇಧ ವಿಫಲವಾಗಿದೆ. ಎಲ್ಲವೂ ಕೈ ಕೊಟ್ಟಾಗ ನರೇಂದ್ರ ಮೋದಿ, ಇದೀಗ ಕ್ಯಾಶ್‌ಲೆಸ್ ಕುರಿತಂತೆ ಮಾತನಾಡುತ್ತಿದ್ದಾರೆ. ಇದು ಇನ್ನೊಂದು ಅಪಾಯಕಾರಿ ಹೆಜ್ಜೆ. ತಳಸ್ತರದ ಆರ್ಥಿಕ ತಳಹದಿಯ ಮೇಲೆಯೇ ಭಾರೀ ಆಘಾತವನ್ನು ನೀಡುವಂತಹ ಯೋಜನೆಗೆ ಅವರು ಕೈ ಹಾಕಿದ್ದಾರೆ. ಬ್ಯಾಂಕುಗಳಲ್ಲಿ ಹಣ ಉಳಿಸುವ ಮತ್ತು ರಿಲಯನ್ಸ್‌ನಂತಹ ಬೃಹತ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಈ ಕ್ಯಾಶ್‌ಲೆಸ್ ಕರೆ, ಭಾರತದ ಬಡವರನ್ನು ಇನ್ನಷ್ಟು ಬಡವರನ್ನಾಗಿಸಲಿದೆ. ಒಟ್ಟಿನಲ್ಲಿ ಡಿಸೆಂರ್ 31ಕ್ಕೆ ನರೇಂದ್ರ ಮೋದಿ ತನ್ನ ಯೋಜನೆಯ ಲಾಭವನ್ನು ಜನರ ಮುಂದಿ ತೆರೆದಿಡಲೇಬೇಕು. ಯಾಕೆಂದರೆ, ಮೋದಿಯ ಈ ಪ್ರಯೋಗಗಳಿಗೆ ಜನಸಾಮಾನ್ಯರು ಸಾಕಷ್ಟು ಬೆಲೆತೆತ್ತಿದ್ದಾರೆ. ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಈ ತ್ಯಾಗ, ಬಲಿದಾನವನ್ನು ಮೋದಿ ಅನಿಲ್ ಅಂಬಾನಿ, ಅದಾನಿಯಂತಹ ಜನರಿಗೆ ಒತ್ತೆಯಿಟ್ಟರೆ ಅದು ಖಂಡಿತವಾಗಿಯೂ ಜನರಿಗೆ ಮಾಡಿದ ದ್ರೋಹವಾಗುತ್ತದೆ. ಜನರು ಯಾವ ಕಾರಣಕ್ಕೂ ಮೋದಿಯನ್ನು ಮತ್ತು ಬಿಜೆಪಿಯನ್ನು ಕ್ಷಮಿಸಲಾರರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







