ಅನಾಮಿಕರಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ: ನಂಬರ್ ವನ್ ಸ್ಥಾನದಲ್ಲಿರುವ ಪಕ್ಷ ಯಾವುದು ಗೊತ್ತೇ?

ಹೊಸದಿಲ್ಲಿ, ಡಿ.21: ಭಾರತದ ಏಳು ರಾಷ್ಟ್ರೀಯ ಪಕ್ಷಗಳು 2015-16ರಲ್ಲಿ 1,744 ಮಂದಿಯಿಂದ 20 ಸಾವಿರಕ್ಕಿಂತ ಅಧಿಕ ಮೊತ್ತದ ದೇಣಿಗೆ ಪಡೆದಿದ್ದು, ಒಟ್ಟು 102 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಈ ಪೈಕಿ ಬಿಜೆಪಿ ಸಿಂಹಪಾಲು ಪಡೆದಿದ್ದು, 613 ಮಂದಿಯಿಂದ 76 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ.
ಬಿಜೆಪಿ ಘೋಷಿಸಿಕೊಂಡಿರುವ ದೇಣಿಗೆ ಪ್ರಮಾಣ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ, ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಘೋಷಿಸಿಕೊಂಡ ದೇಣಿಗೆಯ ಮೂರು ಪಟ್ಟು. 20 ಸಾವಿರಕ್ಕಿಂತ ಅಧಿಕ ದೇಣಿಗೆ ನೀಡಿದ ದಾನಿಗಳನ್ನು ಪಕ್ಷಗಳು ಗುರುತಿಸಬೇಕಿದೆ.
ಅತ್ಯಧಿಕ ದೇಣಿಗೆ ಸಂಗ್ರಹಿಸಿದ ಪಕ್ಷಗಳ ಸಾಲಿನಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಇದು 918 ದಾನಿಗಳಿಂದ 20 ಕೋಟಿ ಸಂಗ್ರಹಿಸಿದೆ ಎಂದು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಘಟನೆ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಂಕಿ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.
ರಾಜಕೀಯ ಪಕ್ಷಗಳು 2004ರಿಂದ 2015ರವರೆಗೆ ಶೇಕಡ 63ರಷ್ಟು ದೇಣಿಗೆಯನ್ನು ನಗದು ರೂಪದಲ್ಲೇ ಪಡೆದಿವೆ. 20 ಸಾವಿರಕ್ಕಿಂತ ಅಧಿಕ ಪ್ರಮಾಣದ ಸಣ್ಣ ದೇಣಿಗೆಗಳನ್ನು ನೀಡಿರುವವರ ವಿವರಗಳನ್ನು ಮಾತ್ರ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿದ್ದು, ದೊಡ್ಡ ಪ್ರಮಾಣದ ಹಣ ಅನಾಮಧೇಯರಿಂದ ಬಂದಿರುವುದು ಕೂಡಾ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ರಾಜಕೀಯ ಪಕ್ಷಗಳು 20 ಸಾವಿರಕ್ಕಿಂತ ಕಡಿಮೆ ಮೊತ್ತದ ದೇಣಿಗೆಯನ್ನು ಎಷ್ಟು ಪಡೆದಿವೆ ಎಂಬ ವಿವರ ಇನ್ನೂ ಬಹಿರಂಗವಾಗಿಲ್ಲ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







