ಪೊಲೀಸ್ ದೌರ್ಜನ್ಯ: ಒತ್ತಡದಲ್ಲಿ ಕೇರಳ ಸರಕಾರ

ತಿರುವನಂತಪುರಂ, ಡಿ. 21: ಎಡರಂಗದ ಸರಕಾರದ ಘೋಷಿತ ನೀತಿಗೆ ತದ್ವಿರುದ್ಧವಾಗಿ ಕೇರಳ ಪೊಲೀಸ್ ಇಲಾಖೆ ವರ್ತಿಸುತ್ತಿದೆ ಎಂದು ದಟ್ಟ ಆರೋಪ ಕೇಳಿ ಬಂದಿದ್ದು, ಕೇರಳ ಸರಕಾರ ಭಾರೀ ಒತ್ತಡ ಎದುರಿಸುತ್ತಿದೆ ಎಂದು ವರದಿಯಾಗಿದೆ. ಮಾನವಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷರಾಗಿದ್ದ ಎಡಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವವಾದಿ ಹಕ್ಕುಗಳಿಗೆ ಸವಾಲು ಸೃಷ್ಟಿಯಾಗಿದೆ ಎಂದು ಆಡಳಿತ ಪಕ್ಷಗಳಲ್ಲಿ ಅಭಿಪ್ರಾಯ ತಲೆಯೆತ್ತಿದೆ. ಇಬ್ಬರು ಮಾವೊವಾದಿಗಳನ್ನುನಿಲಂಬೂರ್ ಕರುಳಾಯಿ ಅರಣ್ಯದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ ಬಳಿಕ ಪ್ರಥಮವಾಗಿ ಸಿಪಿಐ, ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿತ್ತು. ಆನಂತರ ಮಾನವಹಕ್ಕು ಸಂಟನೆಗಳು ಪಿಣರಾಯಿ ಸರಕಾರವನ್ನು ಕಟುವಾಗಿ ಟೀಕಿಸಿದ್ದವು. ಈ ಸಂದರ್ಭದಲ್ಲಿ ಸಿಪಿಎಂ ನಾಯಕರೊಬ್ಬರು ಮಾವೊವಾದಿಗಳು ಕಮ್ಯುನಿಸ್ಟರಲ್ಲ ಎಂದು ಹೇಳಿಕೆ ನೀಡಿ ಪೊಲೀಸರ ರಕ್ಷಣೆಗೆ ಬಂದದ್ದು, ವಿವಾದವಾಗಿತ್ತು. ಇತ್ತೀಚೆಗಿನ ಹೊಸ ಬೆಳವಣೆಗೆಯಲ್ಲಿ ಸಿಪಿಎಂ ಪೊಲೀಸರನ್ನು ಟೀಕಿಸಿ ರಂಗಪ್ರವೇಶಿಸಿದೆ.
ಪೊಲೀಸರು ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ವ್ಯಕ್ತಿಗಳ ವಿರುದ್ಧ ಯುಎಪಿಎ ಹೇರಿದ್ದು, ರಾಷ್ಟ್ರಗೀತೆ ವಿವಾದಗಳಲ್ಲಿ ಪೊಲೀಸರ ಕ್ರಮ ತೀವ್ರವಿವಾದಕ್ಕೆ ಗುರಿಯಾಗಿದ್ದು, ಸರಕಾರ ಮುಖ ಭಂಗ ಅನುಭವಿಸುವಂತಾಗಿದೆ. ಕಮ್ಯುನಿಸ್ಟ್ ಧುರೀಣ ಮಾಜಿಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಪೊಲೀಸರ ನಿಲುವಿನ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಸಿಪಿಐ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಎರಡನೆ ಬಾರಿ ಪೊಲೀಸರನ್ನು ಖಂಡಿಸಿದ್ದಾರೆ. ಕೇರಳದಲ್ಲಿ ಅಲ್ಲಿನ ಎಡರಂಗ ಸರಕಾರ ಫ್ಯಾಶಿಸ್ಟ್ ಸ್ವಭಾವವನ್ನು ಮೈಗೂಡಿಸಿಕೊಳ್ಳುತ್ತಿದೆಂದು ಜನರಾಡಿಕೊಳ್ಳುತ್ತಿದ್ದಾರೆ. ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪೊಲೀಸರ ವಿರುದ್ಧ ಮಾತಾಡಿದ್ದು, ಪೊಲೀಸರ ಕೆಲವು ನಡವಳಿಕೆಗೂ ಸರಕಾರ ಮತ್ತು ಗೃಹಖಾತೆ ನಿರ್ವಹಿಸುವ ಮುಖ್ಯಮಂತ್ರಿಗೂ ಸಂಬಂಧವಿಲ್ಲ ಎನ್ನುವಂತೆ ಮಾತಾಡಿದ್ದರು. ಪರಿಸ್ಥಿತಿಯನ್ನು ಸುಧಾರಿಸಲು ಸಿಪಿಎಂನ ಕೇಂದ್ರ ನಾಯಕರು ಮಧ್ಯಪ್ರವೇಶಿಸಿದ್ದಾರೆಂದು ಮೂಲಗಳು ತಿಳಿಸಿವೆ. ಪೊಲೀಸರನ್ನು ತನ್ನ ರಾಜಕೀಯ ಹಿತಾಸಕ್ತಿಗೆ ಸಿಪಿಎಂ ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಬೇಕೆಂದು ಕೇರಳದ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ ಎಂದು ವರದಿತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







