ಉಡುಪಿ ಬಿಷಪ್ ರಿಂದ ಕ್ರಿಸ್ಮಸ್ ಸಂದೇಶ

ಸರ್ವಶಕ್ತ ದೇವರು ನಮ್ಮೀ ಲೋಕಕ್ಕೆ, ತಮ್ಮ ಏಕಮಾತ್ರ ಪುತ್ರರನ್ನು ಕಾಣಿಕೆಯಾಗಿ ನೀಡಿದ ಹಬ್ಬವೇ ಕ್ರಿಸ್‌ಮಸ್. ದೇವಕುಮಾರ ಯೇಸುಕ್ರಿಸ್ತರು, ಈ ಧರೆಯಲ್ಲಿ ಹುಟ್ಟಿದಾಗ ಅವರ ದರ್ಶನ ಪಡೆಯಲು ದೂರರಾಷ್ಟ್ರಗಳಿಂದ ಬಂದು, ಅವರನ್ನು ಹುಡುಕಿ, ಅವರ ಸನ್ನಿಧಿಯಲ್ಲಿ ತಮ್ಮ ಕಾಣಿಕೆಗಳನ್ನು ಅರ್ಪಿಸಿದವರು ಮೂವರು ಜ್ಞಾನಿಗಳು.ಈ ಕಾರಣಗಳಿಂದ ಕ್ರಿಸ್‌ಮಸ್ ಹಬ್ಬವು ಕಾಣಿಕೆಗಳ ಹಬ್ಬ ವೆಂದೇ ಕರೆಯಲ್ಪಡುತ್ತದೆ. ಕಾಣಿಕೆಯೆಂದರೆ ಕೇವಲ ಪಡೆದುಕೊಳ್ಳುವುದಲ್ಲ, ಅದಕ್ಕೂ ಮಿಗಿಲಾಗಿ ನೀಡುವುದು. ದೇವರ ಸೃಷ್ಟಿಯಲ್ಲಿ ಯಾರೂ ಹಸಿದವರಾಗಿ, ಬಾಯಾರಿದವರಾಗಿ, ಉಡಲು ವಸ್ತ್ರವಿಲ್ಲದವರಾಗಿ, ನಿರ್ಗತಿಕರಾಗಿ ಇರಬಾರದು. ಉಳ್ಳವರು ತಮ್ಮ ಸಂಪನ್ಮೂಲಗಳನ್ನು, ಇಲ್ಲದವರೊಂದಿಗೆ ಹಂಚಿಕೊಂಡು ಅವರಿಗೆ ಕಾಣಿಕೆಯಾಗಬೇಕೆಂದು ಕ್ರಿಸ್‌ಮಸ್ ಕರೆಕೊಡುತ್ತದೆ.
ಕ್ರಿಸ್ತ ಜಯಂತಿ ಹಬ್ಬದ ಆಚರಣೆಯಲ್ಲಿ ಜಗತ್ತಿನಾದ್ಯಂತ ವೈವಿಧ್ಯವಿದ್ದರೂ ಯೇಸು ಕ್ರಿಸ್ತರ ಜನನದ ಸಂದೇಶದಲ್ಲಿ ಏಕತೆಯಿದೆ. ಆತನು ಶಾಂತಿ, ಪ್ರೀತಿ, ಸಹಕಾರ, ಸೌಹಾರ್ದಗಳ ಸಾಕಾರ ಮೂರ್ತಿ ಎಂಬುದನ್ನು ಕ್ರಿಸ್ಮಸ್ ಸಾರುತ್ತದೆ. ಆತನು ಎಲ್ಲಾ ವರ್ಗದ ಜನರಿಗಾಗಿ ಅವತರಿಸಿದ ದಿವ್ಯತಾರೆ, ದೇವಕುವರನೆಂದು ಜಗವೆಲ್ಲ ಸಂತೋಷಪಡುವಾಗ, ವಿವಿಧ ರೀತಿಯ ಶೋಷಣೆ, ಭಯ,ಭಯೋತ್ಪಾದನೆ,ಕಳವಳ, ಹಿಂಸೆ, ಗಲಭೆ, ಅಸಮಾನತೆಯ ವಾತಾವರಣದಲ್ಲಿ ಯೇಸುಕ್ರಿಸ್ತನ ಶಾಂತಿ-ಪ್ರೀತಿಯ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದು ಹೆಚ್ಚು ಅರ್ಥಪೂರ್ಣ.
ಮನುಜಕುಲಕ್ಕೆ ದೇವರ ಪ್ರೀತಿಯ ಅಗಾಧತೆಯನ್ನು ತಿಳಿಸುವ,ಶಾಂತಿ ಸಂದೇಶವನ್ನು ಸಾರುವ,ಹಬ್ಬಕ್ರಿಸ್‌ಮಸ್. ಸ್ವಾರ್ಥ, ದುರಾಸೆಗಳ ಪ್ರಭಾವದಲ್ಲಿ,ತನಗೆ ಬೇಕಾದಂತೆ ಜೀವಿಸುವ ಪರಿಯಿಂದ,ದೇವರೊಂದಿಗಿನ ಆತ್ಮೀಯ ಸಂಬಂಧದಿಂದ ದೂರಾದ ಮಾನವರನ್ನು,ಮತ್ತೆ ತನ್ನೊಂದಿಗಿನ ಸಂಬಂಧದಲ್ಲಿ ಐಕ್ಯಗೊಳಿಸಲು,ದೇವರು ಆರಿಸಿದ ವಿಶಿಷ್ಟ ವಿಧಾನವೇ ಈ ಧರೆಯಲ್ಲಿ ಯೇಸುವಿನ ಆಗಮನ.ಮನುಷ್ಯತ್ವ ಮರೀಚಿಕೆಯಾದಂತೆ ಭಾಸವಾಗುತ್ತಿರುವ,ಪ್ರಸ್ತುತ ಸಮಾಜದಲ್ಲಿ ದೇವರೂ, ಸಂಪೂರ್ಣ ಮಾನವರೂ ಆದ,ಯೇಸುಕ್ರಿಸ್ತರ ಜಯಂತಿ ಮನುಜಕುಲದ ಹಿರಿಮೆ, ಸ್ವಾತಂತ್ರ್ಯ, ಶಾಂತಿ, ಭಾವೈಕ್ಯತೆ ಹಾಗೂ ನೈತಿಕತೆಯನ್ನು ಜ್ಞಾಪಿಸುವ, ಎತ್ತಿ ಹಿಡಿಯುವ ಶ್ರೇಷ್ಟ ಸಂದರ್ಭವಾಗಿದೆ. ಪ್ರತಿ ಕ್ರಿಸ್‌ಮಸ್ ಹಬ್ಬ ಮಾನವಕುಲಕ್ಕೆ ನಿರೀಕ್ಷೆ ತರುವಂಥದ್ದು. ಕ್ರಿಸ್ತನ ಉಪದೇಶವಾದ ಶಾಂತಿ, ಪ್ರೀತಿ, ಮಾನವೀಯತೆ ಇಂದಿನ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರವಾಗಿದೆ. ಯೇಸುಸ್ವಾಮಿ ನಿನ್ನೆಯಂತೆ ಇಂದು, ಇಂದಿನಂತೆ ನಾಳೆ ಹಾಗೂ ಚಿರಕಾಲ ನಮ್ಮೊಡನೆ ಇರುವವರಾಗಿದ್ದಾರೆ. ಅವರ ಹೆಸರು ಇಮ್ಮಾನುವೆಲ್ ಎಂದರೆ ದೇವರು ನಮ್ಮೊಡನೆ ಎಂದುಅರ್ಥ. ಈ ಕ್ರಿಸ್‌ಮಸ್ ಮತ್ತೊಮ್ಮೆ ಈ ಲೋಕದಲ್ಲಿ ಶಾಂತಿ, ಸಮಾಧಾನ ನೆಲೆಸುವಂತೆ ಮಾಡಲಿ.
ತಾರೆ ತೋರಿದ ದಾರಿಯಲ್ಲೇ ಸಾಗಿ ಕೊನೆಗೂ ಯೇಸುಕಂದನ ದರ್ಶನ ಪಡೆದ ಮೂವರು ಜ್ಞಾನಿಗಳ ಧನ್ಯತಾಭಾವವೂ, ಸಾವಿರಾರು ವರ್ಷಗಳಿಂದಲೂ ನಿರೀಕ್ಷಿಸಲಾಗಿದ್ದ ವಿಮೋಚಕನನ್ನೇ ಲೋಕಕ್ಕೆ ತಂದ ಮರಿಯಳ ದೈವ ತನ್ಮಯತೆಯೂ, ಜೀವನ ಸಾರ್ಥಕತೆಯು,ನಿಮ್ಮೆಲ್ಲರದಾಗಲೆಂದು ಹಾರೈಸುತ್ತಾ ನಿಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಡಾ ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







