ಬಜೆಟ್ ನಂತರ ರೈಲ್ವೆ ದರಗಳ ಹೆಚ್ಚಳ ಸಾಧ್ಯತೆ

ಹೊಸದಿಲ್ಲಿ,ಡಿ.20: ರೈಲ್ವೆ ಇಲಾಖೆಯ ಹೆಚ್ಚುತ್ತಿರುವ ನಷ್ಟವನ್ನು ತಡೆಯಲು ಸರಕಾರವು ಮುಂಗಡಪತ್ರ ಮಂಡನೆಯ ಬಳಿಕ ಪ್ರಯಾಣ ಮತ್ತು ಸರಕು ಸಾಗಾಣಿಕೆ ದರಗಳನ್ನು ಹೆಚ್ಚಿಸಬಹುದು. ಪ್ರಯಾಣಿಕರು ತಾವು ಪಡೆಯುವ ಸೇವೆಗಳಿಗೆ ಹಣವನ್ನು ನೀಡಬೇಕಾಗುತ್ತದೆ ಎಂದು ಹೇಳುವ ಮೂಲಕ ವಿತ್ತಸಚಿವ ಅರುಣ್ ಜೇಟ್ಲಿ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆಯು ಆದರಾತಿಥ್ಯಗಳಂತಹ ಪ್ರಮುಖವಲ್ಲದ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಬೇಕು ಎಂದು ಪ್ರತಿಪಾದಿಸಿದರು. ಇದೇ ಮೊದಲ ಬಾರಿಗೆ ಪ್ರತ್ಯೇಕ ರೈಲ್ವೆ ಮುಂಗಡಪತ್ರವನ್ನು ಕೈಬಿಟ್ಟು ಸಾಮಾನ್ಯ ಮುಂಗಡಪತ್ರದೊಡನೆ ಏಕೀಕರಿಸಲಾಗಿದ್ದು, ಮುಂದಿನ ವರ್ಷದ ಫೆಬ್ರುವರಿಯಲ್ಲಿ ಜೇಟ್ಲಿ ಅದನ್ನು ಮಂಡಿಸಲಿದ್ದಾರೆ.
ರೈಲ್ವೆಯಲ್ಲಿ ನಿರ್ವಹಣೆಗಿಂತ ಜನಪ್ರಿಯ ಯೋಜನೆಗಳೇ ಮೇಲುಗೈ ಪಡೆದು ಕೊಂಡಿವೆ. ಗ್ರಾಹಕರು ತಾವು ಪಡೆದುಕೊಳ್ಳುವ ಸೇವೆಗಳಿಗೆ ಸೂಕ್ತ ದರವನ್ನು ಪಾವತಿಸ ಬೇಕು ಎನ್ನುವ ನೀತಿಯ ಮೇಲೆಯೇ ಯಾವುದೇ ವಾಣಿಜ್ಯ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತದೆ ಎಂದರು.
ಹೆದ್ದಾರಿ ಸಾರಿಗೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸ್ಪಧೆರ್ ನೀಡಬೇಕಾದರೆ ಅದು ತನ್ನ ನಿರ್ವಹಣೆಯನ್ನು ಮತ್ತು ಆಂತರಿಕ ವ್ಯವಸ್ಥಾಪನೆಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಜೇಟ್ಲಿ ಹೇಳಿದರು. ರೈಲುಗಳನ್ನು ಓಡಿಸುವುದು ಇಲಾಖೆಯ ಮುಖ್ಯ ಕೆಲಸವಾಗಿದೆಯೇ ಹೊರತು ಆದರಾತಿಥ್ಯವಲ್ಲ. ಇಂತಹ ಪೂರಕ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಬಹುದಾಗಿದೆ ಎಂದರು.
ವಾರ್ಷಿಕ 33,000 ಕೋ.ರೂ.ನಷ್ಟ
ಪ್ರಯಾಣ ದರಗಳಲ್ಲಿ ಸಬ್ಸಿಡಿಗಳಿಂದಾಗಿ ರೈಲ್ವೆ ವಾರ್ಷಿಕ 33,000 ಕೋ.ರೂ.ನಷ್ಟ ಅನುಭವಿಸುತ್ತಿದೆ. ಆದರೆ ಮಂಗಡಪತ್ರ ಬೆಂಬಲ ಬೇಕಿರುವುದರಿಂದ ದರ ಏರಿಕೆಯ ಪ್ರಕಟಣೆ ಮುಂಗಡಪತ್ರ ಮಂಡನೆಯ ಬಳಿಕವೇ ಹೊರಬೀಳಬಹುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಬ್ರಿಟಿಷರ ಕಾಲದ ಭಾರತೀಯ ರೈಲ್ವೆಯು ಪ್ರತಿನಿತ್ಯ 230 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸುತ್ತಿದೆ. ಆದರೆ ಶಿಥಿಲ ಮೂಲಸೌಕರ್ಯ,ಕಳಪೆ ನಿರ್ವಹಣೆ ಮತ್ತು ಖೋತಾ ಆದಾಯ ವಿಶ್ವದ ನಾಲ್ಕನೇ ಅತ್ಯಂತ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯನ್ನು ಸಂಕಷ್ಟದಲ್ಲಿ ಸಿಲುಕಿಸಿವೆ.
ಈವರೆಗೆ ಆಳಿರುವ ಸರಕಾರಗಳು ರೈಲ್ವೆಯಲ್ಲಿ ಸುಧಾರಣೆಗಳನ್ನು ತರುವುದರಿಂದ ದೂರವೇ ಉಳಿದಿವೆ. ವಿಶೇಷವಾಗಿ ಪ್ರಯಾಣದರಗಳನ್ನು ಹೆಚ್ಚಿಸುವ ಗೋಜಿಗೇ ಹೋಗಿರಲಿಲ್ಲ. ಇದರ ಪರಿಣಾಮವಾಗಿ ದೇಶದ ಅತ್ಯಂತ ದೊಡ್ಡ ಉದ್ಯೋಗ ದಾತನಾಗಿರುವ ರೈಲ್ವೆ ತೀರ ಅಗ್ಗದ ದರಗಳಲ್ಲಿ ಹಲವಾರು ರೈಲುಗಳನ್ನು ಓಡಿಸುತ್ತಿದೆ ಮತ್ತು ತನ್ನ ಹಣಕಾಸು ಸಮತೋಲನವನ್ನು ಕಾಯ್ದುಕೊಳ್ಳಲು ಪರದಾಡುತ್ತಿದೆ.
ಉದಾಹರಣೆಗೆ ಪ್ರಯಾಣಿಕನ ಮೇಲೆ ವೆಚ್ಚ ಮಾಡುವ ಪ್ರತಿ 100 ರೂ.ಗಳಲ್ಲಿ 57 ರೂ.ಗಳು ಮಾತ್ರ ರೈಲ್ವೆಗೆ ಸಿಗುತ್ತದೆ. ಉಳಿದ 43 ರೂ.ಸರಕಾರದ ಸಬ್ಸಿಡಿಯಾಗಿದೆ. ಆರ್ಥಿಕ ದುಸ್ಥಿತಿಯು ರೈಲ್ವೆ ಮೂಲಸೌಕರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು ಅಪಘಾತಗಳು ಮಾಮೂಲಾಗಿಬಿಟ್ಟಿವೆ.
ಸಾಕಷ್ಟು ಹಣವಿದೆ
ಸರಕಾರದ ನೋಟು ರದ್ದತಿ ಕುರಿತು ಪ್ರತಿಪಕ್ಷಗಳ ಟೀಕೆಗಳನ್ನು ತಳ್ಳಿಹಾಕಿದ ಜೇಟ್ಲಿ, ಆರ್‌ಬಿಐ ಸಾಕಷ್ಟು ಕರೆನ್ಸಿಯನ್ನು ಚಲಾವಣೆಯಲ್ಲಿ ಹೊಂದಿದೆ ಎಂದು ಹೇಳಿದರು.
ನಾವು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆವು. ಆರ್‌ಬಿಐ ಬ್ಯಾಂಕುಗಳಿಗೆ ಸಾಕಷ್ಟು ಹಣವನ್ನು ಪೂರೈಸದ ದಿನಗಳೇ ಇಲ್ಲ..ಇಂದೂ ಕೂಡ ಆರ್‌ಬಿಐ ಬಳಿ ಡಿ.30ರವರೆಗೆ ಮಾತ್ರವಲ್ಲ, ಅದರ ನಂತರವೂ ವಿತರಣೆಗೆ ಸಾಕಾಗುವಷ್ಟು ಹಣವಿದೆ ಎಂದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







