ಸಿಎಂ ಆಗಮನಕ್ಕೆ ಒತ್ತಾಯ : ಜೆಡಿಎಸ್ ನಿಂದ ಉಪವಾಸ ಸತ್ಯಾಗ್ರಹ

ಮಡಿಕೇರಿ ಡಿ.21 : ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಪಾಲು ಮಾಡಿದ ಘಟನೆಯನ್ನು ಖಂಡಿಸಿ ಹಾಗೂ ಸರ್ಕಾರ ನಿರಾಶ್ರಿತರಿಗೆ ತಕ್ಷಣ ನಿವೇಶನ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಿ ಜಾತ್ಯಾತೀತ ಜನತಾದಳ ಪಕ್ಷದ ಜಿಲ್ಲಾ ಘಟಕ ನಗರದ ಗಾಂಧಿ ಮಂಟಪದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರ ನೆೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಆದಿವಾಸಿಗಳು ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕ್ರಾಂತಿ ಗೀತೆಗಳನ್ನು ಹಾಡಿದರು. ಆದಿವಾಸಿಗಳನ್ನು ಕಡೆಗಣಿಸಿದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಕೇತ್ ಪೂವಯ್ಯ, ಅನಾದಿಕಾಲದಿಂದಲೂ ಜಿಲ್ಲೆಯ ವಿವಿಧೆಡೆ ನೆಲೆ ಕಂಡುಕೊಂಡಿರುವ ಪ್ರತಿಯೊಂದು ಗಿರಿಜನ ಕುಟುಂಬಗಳಿಗೆ ಭೂಮಿಯ ಹಕ್ಕನ್ನು ನೀಡಬೇಕು. ಆದರೆ, ಆರು ತಿಂಗಳ ಹಿಂದೆ ದಿಡಳ್ಳಿ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದವರನ್ನು ಏಕಾಏಕಿ ಬೀದಿ ಪಾಲು ಮಾಡಿದ ಹಿನ್ನೆಲೆ ಮಾನವೀಯ ನೆಲೆಗಟ್ಟಿನಡಿ ಈ ನಿರಾಶ್ರಿತ 577 ಕುಟುಂಬಗಳ ಪರವಾಗಿ ಹೋರಾಟ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳು ದಿಡ್ಡಳ್ಳಿಗೆ ಆಗಮಿಸಿ ಗಿರಿಜನರ ಸಮಸ್ಯೆಗಳನ್ನು ಆಲಿಸಿ, ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ದಿಡ್ಡಳ್ಳಿ ನಿರಾಶ್ರಿತರ ಪರವಾದ ಪಕ್ಷದ ಹೋರಾಟ ನಿರಂತರವಾಗಿ ನಡೆಯಲಿದ್ದು, ಡಿ.23 ರಂದು ಮಡಿಕೇರಿ ನಗರದಲ್ಲಿ ನಡೆಯುವ ಆದಿವಾಸಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಡಿ.24 ರಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿಯವರು ದಿಡ್ಡಳ್ಳಿಗೆ ಭೇಟಿ ನೀಡಿ, ನಿರಾಶ್ರಿತರ ನೋವನ್ನು ಹಂಚಿಕೊಳ್ಳಲಿದ್ದಾರೆ.ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ಲಾಟರಿ, ಸಾರಾಯಿ ನಿಷೇಧ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಜನಪರ ಕಾಳಜಿಯನ್ನು ಹೊಂದಿದ್ದರು. ಇದೇ ರೀತಿಯ ಕಾಳಜಿ ದಿಡ್ಡಳ್ಳಿ ನಿರಾಶ್ರಿತರ ಪರವಾಗಿಯೂ ತೋರಲಿದ್ದಾರೆ ಎಂದು ಸಂಕೇತ್ ಪೂವಯ್ಯ ಹೇಳಿದರು.
ಪಕ್ಷದ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಕುಮಾರ್, ಮಡಿಕೆೇರಿ ತಾಲ್ಲೂಕು ಅಧ್ಯಕ್ಷ ಡಾ ಯಾಲದಾಳು ಮನೋಜ್ ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿ.ಎಲ್. ವಿಶ್ವ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮನ್ಸೂರ್ ಆಲಿ, ಪಕ್ಷದ ಮಾಜಿ ನಗರಾಧ್ಯಕ್ಷ ಬಿ.ವೈ.ರಾಜೇಶ್, ಪ್ರಮುಖರಾದ ಸುರೇಶ್ ಗೋಪಿ, ಅಬ್ರಾರ್, ಶಶಿಕಲಾ ಸುವರ್ಣ ಐಗೂರು ಪಂಚಾಯ್ತಿ ಸದಸ್ಯ ಚೆನ್ನಪ್ಪ, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಪ್ ಡಿಸೋಜ, ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್, ಬೊಳ್ಳಿಯಂಡ ಗಣೇಶ್, ಯಾದವ್, ಮಂದಣ್ಣ ಮತ್ತಿತರ ಪ್ರಮುಖರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







