ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಇ-ಬ್ಯಾಂಕಿಂಗ್ ವ್ಯವಸ್ಥೆ : ನಳಿನ್ ಕುಮಾರ್ ಕಟೀಲ್

ಮಂಗಳೂರು,ಡಿ.21:ಹಾಲಿ ಆರ್ಥಿಕ ವರ್ಷದ ಮಾರ್ಚ್ ಅಂತ್ಯದೊಳಗೆ ಜಿಲ್ಲೆಯ 318 ಗ್ರಾಮಗಳಲ್ಲಿ ಇ-ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಬ್ಯಾಂಕ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ದ.ಕ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಅವರು ಇಂದು ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂಸದರ ಆದರ್ಶ ಗ್ರಾಮವಾದ ಬಳ್ಪ ಗ್ರಾಮ ಪಂಚಾಯತ್‌ನ್ನು ಡಿಸೆಂಬರ್ ಅಂತ್ಯದೊಳಗೆ ನಗದು ರಹಿತ ಗ್ರಾಮವಾಗಿ ಮಾರ್ಪಾಡು ಮಾಡಲು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕ್ರಮ ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು. ಬಳ್ಪ ಗ್ರಾಮ ಪಂಚಾಯತ್‌ನಲ್ಲಿ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಬಳ್ಪ ಗ್ರಾಮದಲ್ಲಿ ಆರೋಗ್ಯ ತಪಾಸಣೆಯನ್ನು ತಿಂಗಳಿಗೊಮ್ಮೆ ನಿಗದಿತವಾಗಿ ನಡೆಸುವಂತೆ ಕೆ.ಎಸ್.ಹೆಗ್ಡೆ,ಮುಕ್ಕಾದ ಶ್ರಿನಿವಾಸ್ ಕಾಲೇಜುಗಳನ್ನು ಕೋರಲಾಗಿದೆ ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನವರು ಈಗಾಗಲೆ ಬಳ್ಪ ಗ್ರಾಮದ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ ಎಂದು ಜಿಲ್ಲಾ ಪಂಚಾಯತ್‌ನ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹೆದ್ದಾರಿ ಕಾಮಗಾರಿ ವಿಳಂಬ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ನಳಿನ್ ಕುಮಾರ್:-ಹೆದ್ದಾರಿಯ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು,‘‘ಪಂಪ್‌ವೆಲ್ ಬಳಿಯ ಮೇಲ್ಸೆತುವೆ ಕಾಮಗಾರಿ,ನಂತೂರು-ತಲಪಾಡಿ ರಸ್ತೆ ಕಾಮಗಾರಿ ,ತೊಕ್ಕೊಟ್ಟು ಮೇಲ್ಸೆತುವೆ ಕಾಮಗಾರಿ ಬಿ.ಸಿ ರೋಡ್ ರಸ್ತೆ ಸರ್ವಿಸ್ ರೋಡ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.ಈ ರೀತಿಯ ವಿಳಂಬವಾಗುತ್ತಿರುವುದನ್ನು ಸಹಿಸುವುದಿಲ್ಲ .ಪ್ರತಿ ಮೀಟಿಂಗ್‌ನಲ್ಲಿಯೂ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಭರವವಸೆ ನೀಡಿ ಹೋಗುತ್ತೀರಿ.ಕಾಮಗಾರಿ ಪೂರ್ಣಗೊಳ್ಳದೆ ಹಲವು ವರ್ಷಗಳಾಗುತ್ತಿವೆ .ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾ ಗುವುದು.ಟಾಲ್‌ಗೇಟ್ ಮಾಡಲು ಅವಸರ ಮಾಡುತ್ತಿದ್ದೀರಿ.ಹೆದ್ದಾರಿಯ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಲು ನಿಗದಿತ ಸಮಯದ ಮಿತಿಯೊಳಗೆ ಪೂರೈಸಬೇಕು ’’ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಪ್ರಸ್ತಾಪವಾದ ರೂ 500ನೋಟು ಅಭಾವದ ಸಮಸ್ಯೆ:
ದೇಶದಲ್ಲಿ 500 ರೂ ಹಾಗೂ 1000ರೂ ಮುಖ ಬೆಲೆಯ ನೋಟುಗಳು ಅಮಾನ್ಯವಾದ ಬಳಿಕ ಜಿಲ್ಲೆಯಲ್ಲಿ ಶೇ 50ರಷ್ಟು ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.ಅದರಲ್ಲೂ 500 ಮತ್ತು 100 ರೂಗಳ ಕೊರತೆ ಇದೆ.ಜಿಲ್ಲೆಗೆ ಇದುವರೆಗೆ 500ರೂ ನೋಟು ಕೇವಲ 50ಲಕ್ಷ ಮಾತ್ರ ಬಂದಿದೆ.ಈಗ 2000ಮುಖ ಬೆಲೆಯ ನೋಟುಗಳು ಸರಬರಾಜಾಗುತ್ತಿದೆ.500ರೂ 100ರೂ ನೋಟುಗಳು ಸಾಕಷ್ಟು ಪೂರೈಕೆಯಾಗುತ್ತಿಲ್ಲ ಎಂದು ಲೀಡ್ ಬ್ಯಾಂಕಿನ ಮ್ಯಾನೇಜರ್ ರಾಘವ ಯಜಮಾನ್ಯ ಸಭೆಗೆ ತಿಳಿಸಿದರು.ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಯ ಫಲಾನುಭವಿಗಳಿಗೆ ಸರಕಾರದ ಸಾಲಯೋಜನೆ ಮಂಜೂರಾಗಿದ್ದರೂ ವಾರದಲ್ಲಿ ಗರಿಷ್ಠ 24 ಸಾವಿರ ರೂ ಖಾತೆಯಿಂದ ಪಡೆಯಲು ಬ್ಯಾಂಕ್‌ಗೆ ಹೋದಾಗ ಅಷ್ಟು ಹಣ ದೊರೆಯುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್‌ನ ಉಪಕಾರ್ಯದರ್ಶಿ ಸಭೆಗೆ ತಿಳಿಸಿದರು.ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ನಳಿನ್ ಕುಮಾರ್ ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್‌ಗೆ ಸಂಬಂಧಿಸಿದಂತೆ ನಗರ ಪ್ರದೇಶದಲ್ಲಿ 181 ವಾರ್ಡ್‌ಗಳನ್ನು ಗುರುತಿಸಲಾಗಿದ್ದು 98 ವಾರ್ಡ್‌ಗಳನ್ನು ಬಯಲು ಬಹಿರ್ದೆಸೆ ಮುಕ್ತ ವಾರ್ಡ್‌ಗಳೆಂದು ಘೋಷಣೆ ಮಾಡಲಾಗಿದೆ.ಡಿಸೆಂಬರ್ ಅಂತ್ಯದೊಳಗೆ 138 ವಾರ್ಡ್‌ಗಳನ್ನು ಬಹಿರ್ದೆಸೆ ಮುಕ್ತ ವಾರ್ಡ್‌ಗಳೆಂದು ಘೊಷಣೆ ಮಾಡಲಾಗುವುದು.ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯ ನಗರ ಸ್ತಳೀಯ ಸಂಸ್ಥೆಗಳಿಗೆ ಒಟ್ಟು 46.90ಲಕ್ಷ ಅನುದಾನ ಬಿಡುಗಡೆ ಯಾಗಿದ್ದು 31.30ಲಕ್ಷ ರೂ ಖರ್ಚಾಗಿರುತ್ತದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸಭೆಗೆ ತಿಳಿಸಿದರು.
ಜಿಲ್ಲಾಪಂಚಾಯತಿನ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು,ಜಿಲ್ಲಾಧಿಕಾರಿ ಡಾ.ಜಗದೀಶ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ರವಿ ಮೊದಲಾದವರು ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







