ಗಾಯಾಳುಗಳನ್ನು ರಸ್ತೆಯಲ್ಲೇ ಬಿಟ್ಟು ಹೋದ ಸಚಿವ !

ಹೈದರಾಬಾದ್,ಡಿ.21: ಸಚಿವರು,ಶಾಸಕರು, ಸಂಸದರೆಲ್ಲ ಜನಪ್ರತಿನಿಧಿಗಳೆಂದು ಸ್ವಯಂ ಅರಿತಿಲ್ಲ ಎನ್ನುವ ಅದೆಷ್ಟೊ ಘಟನೆಗಳು ನಮ್ಮಲ್ಲಿ ನಡೆಯುತ್ತಿವೆ. ತೆಲಂಗಾಣದ ಆದಿವಾಸಿ ಕಲ್ಯಾಣ ಸಚಿವ ಅಸ್ಮಿರ ಚಾಂದುಲಾಲ್ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ತಲುಪಿಸದೆ ಅವಸರವಿದೆ ಎಂದು ಹೇಳಿ ಗಾಯಾಳುಗಳನ್ನು ಘಟನಾ ಸ್ಥಳದಲ್ಲೇ ಬಿಟ್ಟು ಹೊರಟುಹೋಗುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರವಿವಾರ ಮಧ್ಯಾಹ್ನ ಜಯಶಂಕರ್ ಭೂಪಾಪಳ್ಳಿ ಜಿಲ್ಲೆಯ ಪಾಲಂಪೇಟ್ಟ ಗ್ರಾಮದ ನಲ್ಲಕಲುವ ಕ್ರಾಸ್ ರಸ್ತೆಯಲ್ಲಿ ಬೈಕ್-ಟಾಟ ವಾಹನ ನಡುವೆ ಢಿಕ್ಕಿ ಸಂಭವಿಸಿತ್ತು. ಬೈಕ್‌ಸವಾರ ಮದುಸೂದನಾಚಾರಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಇಬ್ಬರುಗೆಳೆಯರು ಗಂಭೀರ ಗಾಯಗೊಂಡಿದ್ದರು.
ಈ ವೇಳೆ ಸಚಿವರ ಕಾರು, ಬೆಂಗಾವಲು ವಾಹನಗಳು ಇದೇ ದಾರಿಯಾಗಿ ಬರುತ್ತಿತ್ತು. ಅಪಘಾತ ಸ್ಥಳದಲ್ಲಿ ನೆರದಿದ್ದ ಗ್ರಾಮೀಣರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಬೇಕೆಂದು ವಿನಂತಿಸಿದ್ದಾರೆ. ಆದರೆ, ಸಚಿವರು ತಾನು ಅವಸರದಲ್ಲಿದ್ದೇನೆ ಎಂದು ಗಾಯಾಳುಗಳನ್ನು ಅಲ್ಲೇ ಬಿಟ್ಟು ಮುಂದೆ ಸಾಗಿದ್ದಾರೆ. ಸ್ಥಳದಲ್ಲಿದ್ದ ಯುವಕನೊಬ್ಬ ಮೊಬೈಲ್ ಫೋನಲ್ಲಿ ಈ ದೃಶ್ಯಗಳನ್ನು ಚಿತ್ರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರಿಂದ ಸಚಿವರ ಉಡಾಫೆ ಹೊರಜಗತ್ತು ತಿಳಿಯುವಂತಾಗಿದೆ. ಸಚಿವರ ವಾಹನಗಳು ದಾಟಿ ಹೋದಮೇಲೆ ಬಂದ ಪೊಲೀಸರು ಮುಂದಿನ ಕ್ರಮ ಜರಗಿಸಿದ್ದಾರೆ. ಅಪಘಾತ ಸಚಿವರ ಸ್ವಕ್ಷೇತ್ರದಲ್ಲಿ ನಡೆದಿತ್ತು.
’ ಆತ್ಮೀಯರ ಫೋನ್ ಕರೆಬಂದ್ದರಿಂದ ತಾನುಅವಸರದಲ್ಲಿದ್ದೆ. ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗಲೆಲ್ಲ ತಾನು ಸಹಾಯ ಮಾಡುತ್ತೇನೆಂದು ಸಚಿವರು ಘಟನೆ ಕುರಿತು ಸ್ಪಷ್ಟೀಕರಣ ನೀಡಿದ್ದಾರೆಂದು ವರದಿಯೊಂದು ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







