ಕಲ್ಪನೆ ಚೂರಿ ಇರಿತ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಬಂಟ್ವಾಳ, ಡಿ. 21: ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇವದಾಸ ಯಾನೆ ದೇವು(30), ಪ್ರಶಾಂತ್(28), ಸತೀಶ ಯಾನೆ ಕಾಳು(30), ಉಮೇಶ(30) ಬಂಧಿತ ಆರೋಪಿಗಳು.
ಗುರುಪುರ ಕೈಕಂಬದಲ್ಲಿ ಮದುವೆ ಕಾರ್ಯ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದ ಮಲ್ಲೂರು ಬದ್ರಿಯಾ ನಗರದ ನಿವಾಸಿ ಅಬ್ಬಾಸ್ ಎಂಬವರ ಪುತ್ರ, ವಿದ್ಯಾರ್ಥಿ ಮುಹಮ್ಮದ್ ಜುನೈದ್(17) ಮತ್ತು ಬಿ.ಸಿ.ರೋಡ್ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮುಹಮ್ಮದ್ ಸಿನಾನ್(18) ಎಂಬವರನ್ನು ಇನ್ನೊಂದು ಬೈಕ್‌ನಲ್ಲಿ ಬಂದ ಆರೋಪಿಗಳು ಕಳ್ಳಿಗೆ ಗ್ರಾಮದ ಕಲ್ಪನೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ ಅವ್ಯಾಚ ಶಬ್ದಗಳಿಂದ ನಿಂದಿಸಿದರಲ್ಲದೆ ಚೂರಿಯಿಂದ ಇರಿದಿದ್ದರು.
ಈ ಬಗ್ಗೆ ಪ್ರಕರಣದ ದಾಖಲಿಸಿದ್ದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಬುಧವಾರ ಮುಂಜಾನೆ ಆರೋಪಿಗಳು ಉಡುಪಿ ಕಡೆಗೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಕೊಡ್ಮಾಣ್ ಅಬ್ಬೆಟ್ಟು ಶಾಲೆಯ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ನಿರ್ದೇಶನದಂತೆ, ಡಿಸಿಐಬಿ ನಿರೀಕ್ಷಕರಾದ ಎ.ಅಮಾನುಲ್ಲಾ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಮಾರ್ಗದರ್ಶನದಂತೆ ಡಿಸಿಐಬಿ ಸಿಬ್ಬಂದಿಯಾದ ಸಂಜೀವ ಪುರುಷ, ಲಕ್ಷ್ಮಣ ಕೆ.ಜಿ., ಪಳನಿವೇಲು, ಇಕ್ಬಾಲ್, ಉದಯ ರೈ, ಸತೀಶ, ವಾಸು ನಾಯ್ಕ ಮತ್ತು ವಿಜಯ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







