ಸುರಕ್ಷಿತ ರಕ್ತ ಸಂಗ್ರಹ ಬಹಳ ಅಗತ್ಯ: ಡಾ.ಶಮೀ ಶಾಸ್ತ್ರಿ

ಉಡುಪಿ, ಡಿ.21: ರಕ್ತದಾನವು ಇತರರ ಜೀವ ಉಳಿಸುವುದು ಮಾತ್ರವಲ್ಲದೆ ಕಾಯಿಲೆಗಳಿಗೂ ಕಾರಣವಾಗುತ್ತದೆ. ಆದುದರಿಂದ ಸುರಕ್ಷಿತವಾದ ರಕ್ತ ಸಂಗ್ರಹ ಬಹಳ ಅಗತ್ಯ. ನಿರಂತರ, ನಿಯಮಿತ ಹಾಗೂ ಸ್ವಯಂ ಪ್ರೇರಿತ ರಾಗಿ ನೀಡುವ ರಕ್ತವು ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಬ್ಲಡ್‌ಬ್ಯಾಂಕಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಶಮೀ ಶಾಸ್ತ್ರಿ ಹೇಳಿದ್ದಾರೆ.
ಉಡುಪಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕ್ ಸಹಯೋಗದಲ್ಲಿ ಬುಧವಾರ ಉಡುಪಿ ಜಾಮೀಯ ಮಸೀದಿಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಶಿಬಿರವನ್ನು ಉದ್ಘಾಟಿಸಿದ ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಮಾತನಾಡಿ, ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲ. ಅದನ್ನು ಕಂಡುಹಿಡಿಯುವಲ್ಲಿ ನಾವು ಈವರೆಗೆ ಸಫಲರಾಗಿಲ್ಲ. ರಕ್ತದಾನ ಎಂಬುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಕಾರ್ಯ. ಇದರಲ್ಲಿ ಜಾತಿ ಧರ್ಮಕ್ಕಿಂದ ಒಂದು ಜೀವ ಉಳಿಸುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಮಸೀದಿಯ ಅಧ್ಯಕ್ಷ ಹಾಜಿ ಕೆ.ಅಬ್ದುಲ್ಲಾ ಪರ್ಕಳ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಸಯ್ಯದ್ ಯಾಸೀನ್, ಉಡುಪಿ ಪಿಎಫ್‌ಐ ಕಮ್ಯೂನಿಟಿ ಡೆವಲಪ್‌ಮೆಂಟ್‌ನ ಮುನೀರ್ ಸಾಹೇಬ್ ಕಲ್ಮಾಡಿ, ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್ ಸ್ವಾಗತಿಸಿ ವಂದಿಸಿದರು. ಮಾಜಿ ಅಧ್ಯಕ್ಷ ಮುಹಮ್ಮದ್ ವೌಲಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಒಟ್ಟು 107 ಯುನಿಟ್ ರಕ್ತವನ್ನು ಸಂಗ್ರಹಿಸ ಲಾಯಿತು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







