ಆಗುಂಬೆ ನಟರಾಜ್‌ಗೆ ಅಕಲಂಕ ದತ್ತಿ ಪುರಸ್ಕಾರ ಪ್ರದಾನ

ಉಡುಪಿ, ಡಿ.21: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಉಪ್ಪಂಗಳ ರಾಮ ಭಟ್ ಮತ್ತು ಶಂಕರಿ ಆರ್.ಭಟ್‌ರ ಅಕಲಂಕ ದತ್ತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಸಾಹಿತಿ ಆಗುಂಬೆ ನಟರಾಜ್ ಅವರಿಗೆ ಅಕಲಂಕ ದತ್ತಿ ಪುರಸ್ಕಾರವನ್ನು ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಗುಂಬೆ ನಟರಾಜ್, ನಮ್ಮ ಮಾತೃ ಭಾಷೆಯ ಪ್ರಗತಿ ನಮ್ಮ ಕೈಯಲ್ಲಿದೆ. ಮೊದಲು ಭಾಷೆಯ ಬಗ್ಗೆ ಪ್ರೀತಿ ಹಾಗೂ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಆದರೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕನ್ನಡದ ಸ್ಥಿತಿ ಶೋಚನೀಯವಾಗಿದೆ ಎಂದು ಖೇದ ವ್ಯಕ್ತ ಪಡಿಸಿದರು.
ಭಾರತೀಯರಿಗೆ ಇತಿಹಾಸ ಪ್ರಜ್ಞೆ ಎಂಬುದಿಲ್ಲ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಅಂಬೇಡ್ಕರ್ ದಲಿತರಿಗಾಗಿ, ಜಿನ್ನಾ ಪಾಕಿಸ್ತಾನಕ್ಕಾಗಿ, ಸಿಖ್ಖರು ಖಾಲಿಸ್ತಾನಕ್ಕಾಗಿ ಹೋರಾಟ ನಡೆಸಿದರು. ಆದರೆ ಯಾರಿಗೂ ಹಿಂದೂಸ್ತಾನ ಬೇಕಾಗಿರಲಿಲ್ಲ. ಇದೀಗ ಮತ್ತೆ ಅದೇ ರೀತಿಯ ಇತಿಹಾಸ ಮರುಕಳಿಸುತ್ತಿದೆ. ಪ್ರತಿಯೊಂದು ಜಾತಿಯವರಿಗೆ ತಮ್ಮದೆ ಸ್ಥಾನಮಾನ ಬೇಕಾಗಿದೆ ಎಂದರು.
ಸಾಹಿತಿ ಡಾ.ಉಪ್ಪಂಗಳ ರಾಮ ಭಟ್ ಅವರ ಲೇಖನಗಳ ಸಂಗ್ರಹ ‘ಅಭಿವ್ಯಕ್ತಿ’ ಕೃತಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಗೊಳಿಸಿದರು. ಹಿರಿಯ ಸಾಹಿತಿ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಿದರು.
ಡಾ.ಉಪ್ಪಂಗಳ ರಾಮ ಭಟ್, ಕಾಲೇಜಿನ ಪ್ರೊ.ಲವರಾಜ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ ಸ್ವಾಗತಿಸಿದರು. ಶಮಂತ್ ಕಾರ್ಯಕ್ರಮ ನಿರೂಪಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







