ಚಹಾದಂಗಡಿಯಲ್ಲಿ ಡಿಜಿಟಲ್ ಪಾವತಿಗೆ ಪಾಸ್ವಾನ್ ವಿಫಲ

ಹಾಜಿಪುರ(ಬಿಹಾರ), ಡಿ.21: ಕೇಂದ್ರ ಸಚಿವ ರಾಂವಿಲಾಸ್ ಪಾಸ್ವಾನ್, ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ತನ್ನ ಹಾಜಿಪುರ ಲೋಕಸಭಾ ಕ್ಷೇತ್ರಕ್ಕೆ ಬಂದಿದ್ದರು. ಆದರೆ, ನಿಧಾನಗತಿಯ ಅಂತರ್ಜಾಲ ಸಂಪರ್ಕದಿಂದಾಗಿ ಅವರ ಈ ಪ್ರಯತ್ನ ವಿಫಲವಾಗಿದೆ.
ಹಾಜಿಪುರದ ಅಂಗಡಿಯೊಂದರಲ್ಲಿ ಚಹಾ ಸೇವಿಸಿದ ಬಳಿಕ ಪಾಸ್ವಾನ್ ಕಾರ್ಡ್‌ನ ಮೂಲಕ ಹಣಪಾವತಿಸಲು ಪ್ರಯತ್ನಿಸುತ್ತಿದ್ದರು. ಅವರು ಸುಮಾರು ಅರ್ಧ ತಾಸಿನ ಕಾಲ ಪ್ರಯತ್ನಿಸಿದರಾದರೂ, ಅಂತರ್ಜಾಲ ಸಂಪರ್ಕ ನಿಧಾನವಾಗಿದ್ದುದರಿಂದ ಆನ್‌ಲೈನ್ ಪಾವತಿಗೆ ವಿಫಲರಾದರೆಂದು ವರದಿಯೊಂದು ತಿಳಿಸಿದೆ.
ಹಲವು ಬಾರಿ ಪ್ರಯತ್ನಿಸಿದರೂ ಆನ್‌ಲೈನ್ ಪಾವತಿಗೆ ವಿಫಲರಾದ ಪಾಸ್ವಾನ್ ಅಸಹಾಯಕರಾಗಿ ನೋಡುತ್ತಿದ್ದರು. ಬಳಿಕ ಅವರ ಆಪ್ತ ಕಾರ್ಯದರ್ಶಿ ತನ್ನ ಫೋನ್‌ನ ಮೂಲಕ ಹಣ ಪಾವತಿ ಮಾಡಿದರು. ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ಸಲುವಾಗಿ ಇಲ್ಲಿಗೆ ಬಂದಿದ್ದ ಪಾಸ್ವಾನ್, ಕಾರ್ಡ್ ಬಳಸಿ ಕೆಲವು ವಸ್ತುಗಳನ್ನು ಖರೀದಿಸಲು ಬಯಸಿದ್ದರು. ಈ ಮೂಲಕ ಜನಸಾಮಾನ್ಯರೂ ನಗದುರಹಿತ ವಹಿವಾಟು ನಡೆಸಬಹುದೆಂದು ತೋರಿಸುವುದು ಅವರ ಉದ್ದೇಶವಾಗಿತ್ತು. ಮೊದಲು ಸಿನೆಮಾ ರಸ್ತೆಯ ಸಿಹಿತಿಂಡಿಗಳ ಅಂಗಡಿಯೊಂದಕ್ಕೆ ಹೋದ ಪಾಸ್ವಾನ್, ಸಿಹಿ ತಿಂಡಿ ಹಾಗೂ ಕೇಕ್ ಖರೀದಿಸಿ, ಕಾರ್ಡ್ ಮೂಲಕ ಹಣ ಪಾವತಿಸಿದ್ದರು. ಆದರೆ, ಚಹಾದಂಗಡಿಯಲ್ಲಿ ಆನ್‌ಲೈನ್ ಪಾವತಿಗೆ ಅವರು ವಿಫಲರಾದರೆಂದು ಕೆಲವು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಅಲ್ಲಿಂದ ಪಾಸ್ವಾನ್ ಬಟ್ಟೆಯಂಗಡಿಗೆ ಹೋಗಿ 2 ಜೊತೆ ಸಾಕ್ಸ್ ಖರೀದಿಸಿ ಆನ್‌ಲೈನ್ ಪಾವತಿ ಮಾಡಿದ್ದಾರೆ.
ಭಾರತದಾದ್ಯಂತ ಜನರು ನಗದು ರಹಿತ ಪಾವತಿ ವಿಧಾನ ಬಳಸಬೇಕು. ಇದರಿಂದ ಖರೀದಿದಾರರಿಗೂ, ಅಂಗಡಿಗಾರರಿಗೂ ಲಾಭವಿದೆಯೆಂದು ಅವರು ಬಳಿಕ ಹೇಳಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







