ಪ್ರಧಾನಿಯಾಗುವುದಕ್ಕೆ ಮುನ್ನ ಸಹಾರಾದಿಂದ 40 ಕೋ.ರೂ.ಪಡೆದಿದ್ದ ಮೋದಿ: ರಾಹುಲ್ ಗಾಂಧಿ

ಹೊಸದಿಲ್ಲಿ,ಡಿ.21: ಕೇಂದ್ರ ಸರಕಾರದ ವಿರುದ್ಧ ತನ್ನ ದಾಳಿಯನ್ನು ಬುಧವಾರ ಇನ್ನಷ್ಟು ತೀವ್ರಗೊಳಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ಸಹಾರಾ ಇಂಡಿಯಾ ಉದ್ಯಮ ಸಮೂಹವು ಅವರಿಗೆ 40 ಕೋ.ರೂ.ಗಳನ್ನು ಪಾವತಿಸಿತ್ತು ಎಂದು ಆರೋಪಿಸಿದರು.
ಉತ್ತರ ಗುಜರಾತ್‌ನ ಮೆಹ್ಸಾನಾದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013-14 ರಲ್ಲಿ ಆರು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಸಹಾರಾದಿಂದ ಹಣವನ್ನು ಪಡೆದು ಕೊಂಡಿದ್ದರು ಎಂದು ಹೇಳಿದರು. 2014ರಲ್ಲಿ ಸಹಾರಾದ ಕಚೇರಿಯ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು 2013,ಅಕ್ಟೋಬರ್-2014,ಫೆಬ್ರವರಿ ನಡುವೆ ಮೋದಿಯವರಿಗೆ ಹಣ ಪಾವತಿಯನ್ನು ತೋರಿಸುವ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದರು ಎಂದ ಅವರು, ಎರಡೂವರೆ ವರ್ಷಗಳಾದರೂ ಆದಾಯ ತೆರಿಗೆ ಇಲಾಖೆಯು ಈ ದಾಖಲೆಗಳ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಬೆಟ್ಟು ಮಾಡಿದರು.
ಆದಾಯ ತೆರಿಗೆ ಇಲಾಖೆಯ ಬಳಿಯಿರುವ ದಾಖಲೆಗಳಂತೆ ಮೋದಿಯವರಿಗೆ 2013ರ ಅ.30ರಂದು 2.5 ಕೋ.ರೂ.,ನ.12ರಂದು 5ಕೋ.ರೂ.,ನ.27ರಂದು 2.5 ಕೋ.ರೂ., ನ.29ರಂದು 5 ಕೋ.ರೂ.,ಡಿ.6ರಂದು 5 ಕೋ.ರೂ. ಮತ್ತು ಡಿ.19ರಂದು 5 ಕೋ.ರೂ.,2014ರ ಜ.13ರಂದು 5 ಕೋ.ರೂ.,ಜ.28ರಂದು 5 ಕೋ.ರೂ.ಮತ್ತು ಫೆ.22ರಂದು 5 ಕೋ.ರೂ.ಗಳನ್ನು ಸಹಾರಾ ಪಾವತಿಸಿದೆ ಎಂದು ರಾಹುಲ್ ವಿವರಿಸಿದರು.
ನೋಟು ರದ್ದತಿ ಕುರಿತು ಮೋದಿ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ ಅವರು, ಸರಕಾರದ ಕ್ರಮವು ಭ್ರಷ್ಟಾಚಾರ ಅಥವಾ ಕಪ್ಪುಹಣದ ವಿರುದ್ಧ ಅಲ್ಲ, ಅದು ಪ್ರಾಮಾಣಿಕ ಬಡಜನರ ವಿರುದ್ಧದ ಕ್ರಮವಾಗಿದೆ ಎಂದರು.
ನೋಟು ರದ್ದತಿಯ ಬಳಿಕ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಪ್ರಸ್ತಾಪಿಸಿದ ಅವರು, ರೈತರು ಚೆಕ್ ಅಥವಾ ಕಾರ್ಡ್ ಬಳಸಿ ಬೀಜಗಳನ್ನು ಖರೀದಿಸುವುದಿಲ್ಲ, ಅವರು ನಗದು ಹಣ ನೀಡುತ್ತಾರೆ. ಪ್ರಧಾನಿ ಮೋದಿಯವರು ಅವರಿಂದ ಆ ದುಡ್ಡನ್ನೂ ಕಸಿದುಕೊಂಡಿದ್ದಾರೆ ಎಂದರು.
ಭ್ರಷ್ಟಾಚಾರವನ್ನು ನಿರ್ಮೂಲಿಸಲು ಸರಕಾರವು ಏನಾದರೂ ಕ್ರಮ ಕೈಗೊಂಡಿದ್ದಿದ್ದರೆ ಕಾಂಗ್ರೆಸ್ ಅದನ್ನು ಬೆಂಬಲಿಸುತ್ತಿತ್ತು ಎಂದ ಅವರು, ಮೋದಿಯವರು ಸಂಸತ್ತಿನಲ್ಲಿ ಕಾರ್ಮಿಕ ವರ್ಗವನ್ನು ಲೇವಡಿ ಮಾಡಿದ್ದಾರೆ ಎಂದು ಆರೋಪಿಸಿದರು.
ನೋಟು ರದ್ದತಿ ಕುರಿತಂತೆ ಸರಕಾರವನ್ನು ತರಾಟೆಗೆತ್ತಿಕೊಂಡ ರಾಹುಲ್, ಎಲ್ಲ ಹಣವೂ ಕಪ್ಪುಹಣವಲ್ಲ ಮತ್ತು ಎಲ್ಲ ಕಪ್ಪುಹಣವೂ ನೋಟುಗಳಲ್ಲ ಎಂದರು. ಸರಕಾರವು ಕಳಂಕಿತ ಉದ್ಯಮಿ ವಿಜಯ ಮಲ್ಯರ ಸಾಲವನ್ನು ಮನ್ನಾ ಮಾಡಿರುವುದನ್ನು ಪ್ರಸ್ತಾಪಿಸಿದ ಅವರು, ಶೇ.1ರಷ್ಟು ಶ್ರೀಮಂತರು ಸಾಲದ ರೂಪದಲ್ಲಿ ಪಡೆದಿರುವ ಹಣವನ್ನು ವಾಪಸ್ ತರಲು ಮೋದಿಯವರಿಗೆ ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಅವರ ಸಾಲವನ್ನು ಕೆಟ್ಟಸಾಲವೆಂದು ತೊಡೆದುಹಾಕಲು ಬಡವರ ಹಣವನ್ನು ಮೋದಿ ಬಳಸಿಕೊಳ್ಳುತ್ತಿದ್ದಾರೆ. ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪುಹಣವನ್ನಿಟ್ಟವರ ಪಟ್ಟಿಯನ್ನು ಸ್ವಿಟ್ಜರ್‌ಲ್ಯಾಂಡ್ ಮೋದಿಯವರಿಗೆ ನೀಡಿರುವಾಗ ಅವರ ಹೆಸರುಗಳನ್ನು ಸಂಸತ್ತಿನಲ್ಲೇಕೆ ಬಹಿರಂಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







