ಇನ್ನು ಭೇಟಿ ನೀಡಲು ದಲಾಯಿ ಲಾಮಾಗೆ ಅನುಮತಿ ನೀಡುವುದಿಲ್ಲ : ಮಂಗೋಲಿಯ ವಿದೇಶ ಸಚಿವ
ಚೀನಾದ ಒತ್ತಡಕ್ಕೆ ಮಂಗೋಲಿಯ ಕೊನೆಗೂ ಮಣಿಯಿತು!

ಉಲಾನ್‌ಬಾಟರ್ (ಮಂಗೋಲಿಯ), ಡಿ. 21: ಇನ್ನು ಮುಂದೆ ಮಂಗೋಲಿಯಕ್ಕೆ ಭೇಟಿ ನೀಡಲು ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೇಶದ ವಿದೇಶ ಸಚಿವ ಟಸೆಂಡ್ ಮುಂಖ್-ಒರ್ಗಿಲ್ ಹೇಳಿದ್ದಾರೆ.
ದೇಶಭ್ರಷ್ಟ ಟಿಬೆಟ್ ನಾಯಕ ಇತ್ತೀಚೆಗೆ ಮಂಗೋಲಿಯಕ್ಕೆ ಭೇಟಿ ನೀಡಿರುವುದನ್ನು ಚೀನಾ ಪ್ರತಿಭಟಿಸಿರುವುದನ್ನು ಸ್ಮರಿಸಬಹುದಾಗಿದೆ. ಅದೇ ವೇಳೆ, ಬೃಹತ್ ಮೊತ್ತ ಸಾಲವೊಂದರ ಕುರಿತ ಮಾತುಕತೆಯನ್ನು ಚೀನಾ ತಡೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಮಂಗೋಲಿಯದ ವಿದೇಶ ಸಚಿವರ ಹೇಳಿಕೆಗೆ ತಾನು ಮಹತ್ವ ನೀಡುವುದಾಗಿಯೂ, ಈ ವಿಷಯದಲ್ಲಿ ತಾನು ನೀಡಿರುವ ಮಾತನ್ನು ಮಂಗೋಲಿಯ ಉಳಿಸಿಕೊಳ್ಳುವುದಾಗಿ ಆಶಿಸುವುದಾಗಿಯೂ ಚೀನಾದ ವಿದೇಶ ಸಚಿವಾಲಯ ಬುಧವಾರ ಹೇಳಿದೆ.
ಧಾರ್ಮಿಕ ನೆಲೆಯಲ್ಲಿಯೂ ದೇಶಕ್ಕೆ ಪ್ರವೇಶಿಸಲು ಇನ್ನು ಮುಂದೆ ದಲಾಯಿ ಲಾಮಾರಿಗೆ ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಮಂಗೋಲಿಯದ ವಿದೇಶ ಸಚಿವರು ನೀಡಿರುವ ಹೇಳಿಕೆಯನ್ನು ಆ ದೇಶದ ಪತ್ರಿಕೆ ‘ಉನೂಡುರ್’ ಮಂಗಳವಾರ ಪ್ರಕಟಿಸಿದೆ.
ಮಂಗೋಲಿಯದ ಆರ್ಥಿಕತೆಯು ಚೀನಾವನ್ನು ಬಲವಾಗಿ ನೆಚ್ಚಿಕೊಂಡಿದೆ. ತನ್ನ ಆರ್ಥಿಕ ಕುಸಿತವನ್ನು ನಿಭಾಯಿಸಲು ಮಂಗೋಲಿಯಕ್ಕೆ ಸಾಧ್ಯವಾಗುವಂತೆ ಆ ದೇಶಕ್ಕೆ 4.2 ಬಿಲಿಯ ಡಾಲರ್ (ಸುಮಾರು 28,500 ಕೋಟಿ ರೂಪಾಯಿ) ಸಾಲ ನೀಡುವ ಬಗ್ಗೆ ಆ ದೇಶದೊಂದಿಗೆ ಚೀನಾ ಮಾತುಕತೆಯಲ್ಲಿ ತೊಡಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







