ಕ್ರಿಸ್ಮಸ್ ಶಾಂತಿಯನ್ನು ಸಾರುವ ಹಬ್ಬ : ಡಾ. ಅಲೋಶಿಯಸ್ ಪಾವ್ಲ್ ಡಿಸೋಜ

ಮಂಗಳೂರು, ಡಿ.21: ಸಮಾಜದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಪಸರಿಸುವ ಸಲುವಾಗಿ ಆಚರಿಸುವ ಕ್ರಿಸ್ಮಸ್ ಶಾಂತಿಯನ್ನು ಸಾರುವ ಹಬ್ಬವಾಗಿದೆ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ಮಂಗಳೂರು ಧರ್ಮಪ್ರಾಂತದ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬುಧವಾರ ಮಿಲಾಗ್ರಿಸ್ ವಠಾರದಲ್ಲಿ ಆಯೋಜಿಸಲಾದ ವಾಹನಗಳ ಮೆಗಾ ರ್ಯಾಲಿಯ ಬಳಿಕ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಏಸು ಕ್ರಿಸ್ತ ಪ್ರೀತಿ, ತ್ಯಾಗ, ಕ್ಷಮೆಯ ಮೂಲಕ ಸಮಾಜದಲ್ಲಿ ಶಾಂತಿದೂತರಾದರು. ಏಸು ಕ್ರಿಸ್ತ ಬೋಧಿಸಿದ ಮತ್ತು ಜೀವಿಸಿದ ವೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅಲೋಶಿಯಸ್ ಪಾವ್ಲ್ ಡಿಸೋಜ ನುಡಿದರು.
ರ್ಯಾಲಿಯಲ್ಲಿ ಧರ್ಮಪ್ರಾಂತದ ಐದು ವಲಯಗಳ (ಎಪಿಸ್ಕೊಪಲ್, ಸಿಟಿ, ಪೆರ್ಮನ್ನೂರು, ಪೇಜಾವರ ಮತ್ತು ಸುರತ್ಕಲ್) ಸಾವಿರಾರು ಮಂದಿ ಭಾಗವಹಿಸಿದ್ದರು.
ಧರ್ಮಪ್ರಾಂತದ ಪ್ರಧಾನ ಗುರು ಡೆನ್ನಿಸ್ ಮೊರಾಸ್ ಪ್ರಭು, ಫಾ. ವಲೇರಿಯನ್ ಡಿಸೋಜ, ರ್ಯಾಲಿ ಸಂಚಾಲಕ ವಂ. ಒನಿಲ್ ಡಿಸೋಜ, ಭಾರತೀಯ ಕೆಥೋಲಿಕ್ ಯುವ ಸಂಚಾಲನದ ನಿರ್ದೇಶಕ ವಂ. ರೊನಾಲ್ಡ್ ಡಿಸೋಜ, ಮಾಧ್ಯಮ ಸಮಿತಿಯ ವಿನ್ಸೆಂಟ್ ಮಸ್ಕರೇನ್ಹಸ್, ರೋಹನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಮಿಲಾಗ್ರಿಸ್ ಚರ್ಚ್‌ನ ಉಪಾಧ್ಯಕ್ಷ ಐವನ್ ಡಿಸೋಜ ಸ್ವಾಗತಿಸಿದರು. ಧರ್ಮಪ್ರಾಂತದ ಪಾಲನಾ ಸಮಿತಿ ಕಾರ್ಯದರ್ಶಿ ಎಂ.ಪಿ.ನೊರೊನ್ಹಾ ವಂದಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







