ಹಾಜಿ ಅಬ್ದುಲ್ಲಾ ಆಸ್ಪತ್ರೆ ಜಾಗ ಹಸ್ತಾಂತರಕ್ಕೆ ಜಿಲ್ಲಾಡಳಿತ ತರಾತುರಿ
ಆರು ಕ್ವಾರ್ಟರ್ಸ್ ಬಿಲ್ಡಿಂಗ್ ತೆರವು, ಮರಗಳಿಗೆ ಕೊಡಲಿಯೇಟು

ಉಡುಪಿ, ಡಿ.21: ಬೆಂಗಳೂರಿನ ಬಿ.ಆರ್.ಎಸ್. ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ‘ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ’ಗಾಗಿ ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರು ಸರಕಾರಕ್ಕೆ ದಾನಪತ್ರದ ಮೂಲಕ ನೀಡಿರುವ ನಗರದ ಕೆಎಂ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸಾಹೇಬ್ ಸ್ಮಾರಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ಟಾಫ್ ಕ್ವಾರ್ಟರ್ಸ್‌ನ 2.03 ಎಕರೆ ಪ್ರದೇಶವನ್ನು ಬಿ.ಆರ್.ಶೆಟ್ಟಿ ಅವರ ವಶಕ್ಕೆ ನೀಡಲು ಜಿಲ್ಲಾಡಳಿತ ತರಾತುರಿಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಯೋಜನೆ ವಿರೋಧಿಗಳು ಆರೋಪಿಸುತಿದ್ದಾರೆ.
ಒಂದು ಕಡೆಯಲ್ಲಿ ದಿ.ಖಾನ್ ಬಹದ್ದೂರ್ ಹಾಜಿ ಅಬ್ದುಲ್ ಸಾಹೇಬರು ದಾನವಾಗಿ ನೀಡಿರುವ ಉಡುಪಿ ಸರಕಾರಿ ಆಸ್ಪತ್ರೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಕಟ್ಟಡ ನಿರ್ಮಿಸಲು ಅನುಮತಿ ನೀಡದಂತೆ ಆಕ್ಷೇಪ ವ್ಯಕ್ತಪಡಿಸಿ ರುವ ಹಾಜಿ ಅಬ್ದುಲ್ ಸಾಹೇಬರ ಸೋದರ ಸಂಬಂಧಿ ಖುರ್ಷಿದ್ ಅಹ್ಮದ್, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್, ನಗರಾಭಿವೃದ್ಧಿ ಇಲಾಖೆ, ಉಡುಪಿ ನಗರಸಭೆ, ನಗರಾಭಿವೃದ್ಧಿ ಪ್ರಾಕಾರ ಉಡುಪಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರ್ಜಿಯನ್ನು ಸಲ್ಲಿಸಿದ್ದರೆ, ಇನ್ನೊಂದು ಕಡೆ ಜಿಲ್ಲಾಡಳಿತ ಅಧಿಕಾರಿಗಳ ತುರ್ತು ಸಭೆ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಯುದ್ಧೋಪಾಧಿಯಲ್ಲಿ ವಿವಿಧ ಕೆಲಸಗಳಿಗೆ ಹಚ್ಚಿದ್ದಾರೆ.
ಹಾಜಿ ಅಬ್ಧುಲ್ಲಾ ಅವರು ತನ್ನ 4.07 ಎಕರೆ ಜಮೀನನ್ನು 1929ರಲ್ಲಿ ಅಂದಿನ ತಾಲೂಕು ಬೋರ್ಡ್ ಮೂಲಕ ಮದರಾಸು ಸರಕಾರಕ್ಕೆ ದಾನಪತ್ರದ ಮೂಲಕ ನೀಡುವಾಗ ಹಲವು ಶರ್ತಗಳನ್ನು ವಿಧಿಸಿದ್ದು, ಅವುಗಳನ್ನೆಲ್ಲಾ ಸರಕಾರ ಉಲ್ಲಂಘಿಸಿ ಉಡುಪಿಯ ಎನ್‌ಆರ್‌ಐ ಉದ್ಯಮಿ ಬಿ.ಆರ್.ಶೆಟ್ಟಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಖುರ್ಷಿದ್ ಅವರ ಆರೋಪ.
1929ರಲ್ಲಿ ಮೂಡನಿಡಂಬೂರು ಗ್ರಾಮದಲ್ಲಿ ಒಟ್ಟು 4.07 ಎಕರೆ ಜಮೀನನ್ನು ಹಾಜಿ ಅಬ್ದುಲ್ ಸಾಹೇಬರು ತನ್ನ ಜೀವಿತಾವಧಿಯಲ್ಲಿ ಸರಕಾರಿ ಮಹಿಳೆಯರ ಹೆರಿಗೆ ಆಸ್ಪತ್ರೆ, ತಂದೆ ಖಾಜಿ ಖಾಸಿಂ ಬುಡಾನ್ ಸಾಹೇಬರ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಮತ್ತು ವೈದ್ಯರಿಗೆ, ನರ್ಸ್‌ಗಳಿಗೆ ವಸತಿ ಕಟ್ಟಡವನ್ನು ನಿರ್ಮಿಸಿ ದಾನ ಪತ್ರ ಬರೆದು ಅಂದಿನ ತಾಲೂಕು ಬೋರ್ಡ್‌ಗೆ ನೀಡಿದ್ದರು.
ಈ ಜಮೀನು ಸರಕಾರಿ ಆಸ್ಪತ್ರೆಯಾಗಿ ಉಳಿಯುವಂತೆ ಮತ್ತು ಈ ಆಸ್ಪತ್ರೆಗೆ ತನ್ನ ಮತ್ತು ತಂದೆಯ ಹೆಸರನ್ನು ಶಾಶ್ವತವಾಗಿ ಇಡುವಂತೆ ಅವರು ಅದರಲ್ಲಿ ಸೂಚಿಸಿದ್ದರು. ಈ ಕಟ್ಟಡದ ಉದ್ದೇಶವನ್ನು ಬದಲಾವಣೆ ಮಾಡದಂತೆ ಮತ್ತು ಜಮೀನಿನಲ್ಲಿ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಮತ್ತು ಆಸ್ಪತ್ರೆಗೆ ಬೇಕಾಗುವ ಪುಸ್ತಕ ಭಂಡಾರವನ್ನು ನೀಡಿರುವುದಾಗಿ ದಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಖುರ್ಷಿದ್ ಹೇಳಿದ್ದಾರೆ.
ನಮ್ಮ ಹಿರಿಯರು ಆಶಿಸಿದಂತೆ ಈ ಜಮೀನಿನಲ್ಲಿ ಸರಕಾರವೇ ನೇರವಾಗಿ ಕಟ್ಟಡ ನಿರ್ಮಿಸದೆ ಖಾಸಗಿಯರಿಗೆ ವಹಿಸಿಕೊಡಲಾಗುತ್ತಿದೆ. ಆ ಮೂಲಕ ದಾನಿಯೊಬ್ಬರ ಉದ್ದೇಶವನ್ನು ಬದಲಾವಣೆ ಮಾಡಲಾಗುತ್ತಿದೆ. ಆದುದರಿಂದ ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಕಟ್ಟಡ ನಿರ್ಮಿ ಸಲು ಅನುಮತಿ ನೀಡಬಾರದು. ಈ ಕುರಿತು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ನಾನು ನಿರ್ಧರಿಸಿದ್ದೇನೆ ಎಂದು ಖುರ್ಷಿದ್ ಅಹ್ಮದ್ ಅರ್ಜಿಯಲ್ಲಿ ತಿಳಿಸಿದ್ದರು.
ಖುರ್ಷಿದ್ ಅವರು ಕಳೆದ ಡಿ.9ರಂದೇ ಎಲ್ಲರಿಗೂ ಪತ್ರ ಬರೆದಿದ್ದರೂ, ಇದುವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವನ್ನು ಹೊರತು ಪಡಿಸಿ ಉಳಿದ ಯಾರಿಂದಲೂ ಉತ್ತರ ಬಂದಿಲ್ಲ. ಪತ್ರದ ಕುರಿತು ಎರಡು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಬನ್ನಂಜೆ ಬಳಿ ಪ್ರಶ್ನಿಸಿದಾಗ ಹಾರಿಕೆಯ ಉತ್ತರಗಳನ್ನು ನೀಡಿದ್ದರು.
ಆದರೆ ಇದೀಗ ತರಾತುರಿಯಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ಟಾಫ್ ಕ್ವಾರ್ಟರ್ಸ್ ಇರುವ ಜಾಗದಲ್ಲಿರುವ ಕಟ್ಟಡಗಳನ್ನು ಕೆಡವಲು ಹಾಗೂ 10ರಿಂದ 50-60ವರ್ಷಗಳಷ್ಟು ಹಳೆಯದಾದ ಹತ್ತಾರು ಮರಗಳನ್ನು ಕಡಿಯಲು ಸಿದ್ಧತೆಗಳು ನಡೆಯುತ್ತಿವೆ. ನಗರದೊಳಗೆ ಅತೀ ಹೆಚ್ಚು ಭಾರೀ ಗಾತ್ರದ ಮರಗಳಿರುವ, ಸಾವಿರಾರು ಪಕ್ಷಿಗಳಿಗೆ ವಾಸದ ತಾಣವಾಗಿರುವ ಜಾಗ ಇದಾಗಿದ್ದು ಕೆಲವೇ ದಿನಗಳಲ್ಲಿ ಅದು ಬಟ್ಟಂಬಯಲಾಗಲಿದೆ.
ಒಂದು ಬದಿಯ ಆರು ವಸತಿಗೃಹಗಳನ್ನು ಈಗಾಗಲೇ ಉರುಳಿಸಲಾಗಿದೆ. ಇನ್ನೊಂದು ಬದಿಯ ಎಂಟು ವಸತಿಗೃಹಗಳಲ್ಲಿ ಇಬ್ಬರು ವೈದ್ಯರು ಹಾಗೂ ಆರು ಮಂದಿ ನರ್ಸ್‌ಗಳು ಸೇರಿದಂತೆ ಇತರ ಸಿಬ್ಬಂದಿಗಳು ವಾಸ್ತವ್ಯದಲ್ಲಿದ್ದಾರೆ.
ಕಳೆದ ಡಿ.1ರಂದು ಈ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಅನುಷ್ಠಾನ ಗೊಳಿಸುವ ಕುರಿತಂತೆ ಜಿಲ್ಲಾಧಿಕಾರಿಗಳು ಸಭೆಯೊಂದನ್ನು ಕರೆದಿದ್ದು, ಇದರಲ್ಲಿ ಜಿಪಂ ಸಿಇಓ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಸರ್ಜನ್, ಡಿಎಚ್‌ಓ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ನಗರಸಭೆಯ ಪೌರಾಯುಕ್ತರು ಸೇರಿದಂತೆ ವಿವಿಧ ಇಲಾಖೆಗಳಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಪ್ರಧಾನವಾಗಿದ್ದ ಅರಣ್ಯ ಇಲಾಖೆ, ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು, ಜಿಲ್ಲಾ ನೊಂದಾವಣಾಧಿಕಾರಿ ಇದರಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿದು ಬಂದಿದೆ.
ವಿವಿಧ ವಿಷಯಗಳ ಕುರಿತ ಚರ್ಚಿಸಿದ ಬಳಿಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರವನ್ನು ಎಂಟು ದಿನಗಳೊಳಗೆ ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಸಭೆಯಲ್ಲಿದ್ದ ಸಂಸ್ಥೆಯ ಇಂಜಿನಿಯರ್ ಹಾಗೂ ಪ್ರತಿನಿಧಿ ತಮಗೆ ಎಲ್ಲಾ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಸಿಕ್ಕಿದ ಮರುದಿನದಿಂದಲೇ ಕಾಮಗಾರಿ ಪ್ರಾರಂಭಿಸುವುದಾಗಿ ಹಾಗೂ 12 ತಿಂಗಳೊಳಗೆ ಕಾಮಗಾರಿ ಮುಕ್ತಾಯ ಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂಬುದು ಲಭ್ಯವಿರುವ ದಾಖಲೆಗಳಿಂದ ತಿಳಿದುಬರುತ್ತದೆ.
ಎಂಓಯು ಎಲ್ಲಿ?: ಆದರೆ ಆಸ್ಪತ್ರೆಯ ಪರಭಾರೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಆರೋಗ್ಯ ಇಲಾಖೆ ಹಾಗೂ ಬಿ.ಆರ್.ಶೆಟ್ಟಿ ಸಂಸ್ಥೆ ನಡುವೆ ಆದ ತಿಳುವಳಿಕೆ ಪತ್ರ ಎಲ್ಲಿದೆ ಎಂಬುದು ಈ ಪರಭಾರೆ ವಿರುದ್ಧ ಹೋರಾಡುತ್ತಿರುವವರು ಸರಕಾರವನ್ನು ಪ್ರಶ್ನಿಸಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯಡಿ ಸರಕಾರ ಮಾಡಿಕೊಂಡ ಅಧಿಕೃತ ಎಂಓಯುನ ಪ್ರತಿಗಾಗಿ ಕೇಳಿದ ಪತ್ರಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ವಿ.ಕಲಾವತಿ, ಉಡುಪಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 200 ಹಾಸಿಗೆಗಳ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹಾಗೂ 400 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಬಗ್ಗೆ ಬಿ.ಆರ್.ಎಸ್.ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಇನ್ನೂ ನೊಂದಣಿಗೊಂಡಿಲ್ಲ. ಆದುದರಿಂದ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡಲು ಅವಕಾಶವಿಲ್ಲ ಎಂದು ನ.29ರಂದು ತಿಳಿಸಿದ್ದಾರೆ. ಖುದ್ದು ಖುರ್ಷಿದ್ ಅವರು ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಗಳಿಗೂ ಡಿ.9ರಂದು ಇದೇ ರೀತಿಯ ಹಾರಿಕೆ ಉತ್ತರಗಳು ಬಂದಿವೆ.
ಡಿ.1ರಂದು ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲೂ ಒಪ್ಪಂದದ ಪ್ರಸ್ತಾಪವಾಗಿಲ್ಲ ಎಂಬುದನ್ನು ಯೋಜನೆಯ ವಿರೋಧಿಗಳು ಎತ್ತಿ ತೋರಿಸುತ್ತಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರದಿದ್ದರೂ ಮರಗಳು ಕೊಡಲಿ ಏಟಿಗೆ ತತ್ತರಿಸಿ ನೆಲಕ್ಕುರುಳಲು ಸಿದ್ಧವಾಗಿವೆ. ಈ ನಡುವೆ ನಗರಾಭಿವೃದ್ಧಿ ಪ್ರಾಧಿಕಾರ ತಾನು ಈಗಾಗಲೇ ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿರುವುದಾಗಿ ಡಿ.14ರಂದು ತಿಳಿಸಿದೆ.
ಒಟ್ಟಿನಲ್ಲಿ ಸರಕಾರದೊಂದಿಗೆ ಯಾವುದೇ ಅಧಿಕೃತ ಒಪ್ಪಂದ ಮಾಡಿಕೊಳ್ಳದೇ 2.03 ಎಕರೆ ಜಾಗವನ್ನು ಬಿ.ಆರ್.ಶೆಟ್ಟಿ ಸಂಸ್ಥೆಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಟ್ಟುಕೊಡಲು ಸರಕಾರ ಮುಂದಾಗಿದೆ ಎಂಬುದು ಯೋಜನೆ ವಿರೋಧಿಗಳು ಹಾಗೂ ಮಾಹಿತಿ ಹಕ್ಕು ಹೋರಾಟಗಾರರು ಆರೋಪಿಸಿದ್ದಾರೆ.
ಖಾಲಿ ವಸತಿಗೃಹಗಳ ತೆರವು
ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ವಸತಿಗೃಹಗಳಲ್ಲಿ ಈಗಾಗಲೇ ದುರ್ಬಲಗೊಂಡಿರುವ, ಯಾರೂ ವಾಸಿಸದ ಆರು ಕಟ್ಟಡಗಳನ್ನು ಕೆಡವಲಾಗಿದೆ. ಇದರಲ್ಲಿ ಇಬ್ಬರು ಸಿಬ್ಬಂದಿಗಳಿದ್ದು ಅವರಿಗೆ ಕಾಡಬೆಟ್ಟಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ರಾವ್ ತಿಳಿಸಿದರು.
ಇನ್ನುಳಿದ ಎಂಟು ವಸತಿಗೃಹಗಳಲ್ಲಿ ಇಬ್ಬರು ವೈದ್ಯರು ಹಾಗೂ ಆರು ಮಂದಿ ನರ್ಸ್ ಮತ್ತು ಇತರ ಸಿಬ್ಬಂದಿಗಳು ವಾಸವಾಗಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ಇದನ್ನು ತೆರವು ಮಾಡಲಾಗುವುದು ಎಂದವರು ನುಡಿದರು.
ಬಿ.ಆರ್.ಶೆಟ್ಟಿ ಸಂಸ್ಥೆಯೊಂದಿಗೆ ಒಪ್ಪಂದದ ಕುರಿತು ಕೇಳಿದಾಗ, ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಬಿ.ಆರ್.ಶೆಟ್ಟಿ ಹಾಗೂ ಆರೋಗ್ಯ ಇಲಾಖೆಯ ಆಯುಕ್ತರು ಸಹಿಹಾಕಿದ್ದಾರೆ. ವಸತಿಗೃಹಗಳಿರುವ 2.03 ಎಕರೆ ಪ್ರದೇಶದಲ್ಲಿ ಸಂಸ್ಥೆ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಿಸಿ ಸರಕಾರಕ್ಕೆ ಹಸ್ತಾಂತರಿಸಿದ ಬಳಿಕವಷ್ಟೇ, ನಾವು ಈಗಿನ ಆಸ್ಪತ್ರೆಯನ್ನು ತೆರವು ಮಾಡುತ್ತೇವೆ ಎಂದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







