ಸುರಕ್ಷತಾ ಕ್ರಮ ಪಾಲನೆಯಲ್ಲಿ ಖಾಸಗಿ ಶಾಲೆಗಳ ನಿರ್ಲಕ್ಷ
ಕ್ರಮ ಕೈಗೊಳ್ಳಲು ಇಲಾಖೆಗಳ ಹಿಂದೇಟು

ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರತಿಷ್ಠಿತ ಖಾಸಗಿ ಶಾಲೆಗಳು
ಬಿ. ರೇಣುಕೇಶ್
ಶಿವಮೊಗ್ಗ, ಡಿ. 21: ಶಾಲಾ ವಾಹನ ಹಾಗೂ ಅದರಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸುಪ್ರೀಂ, ಹೈ.ಕೋರ್ಟ್ ಹಾಗೂ ರಾಜ್ಯ ಸರಕಾರ ಹತ್ತು ಹಲವು ಆದೇಶಗಳನ್ನು ಹೊರಡಿಸಿವೆ. ಆದರೆ ಶಿವಮೊಗ್ಗ ನಗರದ ಕೆಲ ಖಾಸಗಿ ಶಾಲೆಗಳು ಈ ಆದೇಶಗಳ ಸಮರ್ಪಕ ಪಾಲನೆ ಮಾಡುತ್ತಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಈ ಮೂಲಕ ಮುಗ್ಧ ಕಂದಮ್ಮಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆ.
ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ನೀಡುವ ಉದ್ದೇಶದಿಂದ ಹಲವು ನಿಯಾಮಾವಳಿ ರೂಪಿಸಲಾಗಿದೆ. ಆದರೆ ಇವುಗಳ ಪರಿಣಾಮಕಾರಿ ಪಾಲನೆಯಾಗುತ್ತಿಲ್ಲ. ಇಂದಿಗೂ ಕೆಲ ಶಾಲಾ ವಾಹನಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳ ಅಳವಡಿಕೆಯೂ ಆಗಿಲ್ಲ. ಇದನ್ನು ಗಮನಿಸಿ ಕ್ರಮಕೈಗೊಳ್ಳಬೇಕಾದ ಆಡಳಿತ ವ್ಯವಸ್ಥೆ ಮೈಮರೆತು ಕುಳಿತಿದೆ. ಇದರಿಂದ ಶಾಲಾ ವಾಹನ ಸುರಕ್ಷತೆಯ ಬಗ್ಗೆ ಹೇಳುವವರು ಕೇಳುವವರ್ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿಯೇ ಹಲವು ಶಾಲಾ ವಾಹನಗಳು
ಅಪಘಾತಕ್ಕೀಡಾಗುತ್ತಿರುವ ವರದಿಗಳು ಬರುತ್ತಿವೆ. ಹಾಗೆಯೇ ಕೆಲ ಶಾಲಾ ವಾಹನ ಚಾಲಕರು ವಾಹನಗಳನ್ನು ಮಿತಿಮೀರಿದ ವೇಗ, ನಿರ್ಲಕ್ಷ್ಯದಿಂದ ಚಲಾಯಿಸುತ್ತಿರುವ ಆರೋಪಗಳಿವೆ. ವೇಗ ನಿಯಂತ್ರಣಕ್ಕೆ ಅಗತ್ಯವಾದ ಸ್ಪೀಡ್ ಗೌರ್ನರ್‌ಗಳನ್ನೇ ಬಹುತೇಕ ಶಾಲಾ ವಾಹನಗಳಲ್ಲಿ ಅಳವಡಿಕೆ ಮಾಡಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ನಾಗರಿಕರ ಆಕ್ರೋಶ: ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಡೊನೇಷನ್, ಇತರ ಶುಲ್ಕಗಳ ವಸೂಲಿಗೆ ತೋರುವ ಆಸಕ್ತಿ ಶಾಲಾ ವಾಹನಗಳ ಬಗ್ಗೆ ನೀಡುತ್ತಿಲ್ಲ. ಮತ್ತೊಂದೆಡೆ ಕೆಲ ಶಾಲಾ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದಾರೆ. ಈ ಬಗ್ಗೆ ಕೆಲವೊಮ್ಮೆ ಶಾಲೆಯವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಟ್ರಿಪ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಸಮಯ ಹೊಂದಾಣಿಕೆ ಮಾಡಲು ವೇಗದಲ್ಲಿ ವಾಹನ ಓಡಿಸುವುದು ಅನಿವಾರ್ಯ ಎಂದು ಒಮ್ಮೊಮ್ಮೆ ಚಾಲಕರು ಹೇಳುತ್ತಾರೆ. ಈ ಬಗ್ಗೆ ಪೋಷಕರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನಾದರೂ ಶಾಲಾ ಆಡಳಿತ ಮಂಡಳಿಯವರು ಈ ಬಗ್ಗೆ ಗಮನಹರಿಸಬೇಕು’ ಎಂದು ಪೋಷಕರೊಬ್ಬರು ಆಗ್ರಹಿಸುತ್ತಾರೆ.
ಆದೇಶಗಳ ಪಾಲನೆಯಲ್ಲಿ ಕೆಲ ಖಾಸಗಿ ಶಾಲೆಗಳು ಚಿತ್ತ ಹರಿಸಿಲ್ಲ. ಇದು ನಮಗೆ ದುಬಾರಿಯಾಗಿ ಪರಿಣಮಿಸುತ್ತದೆ ಎಂದು ಕೆಲ ಶಾಲೆಯವರು ಹೇಳುತ್ತಾರೆ. ಆದರೆ ಪೋಷಕರಿಂದ ಲಕ್ಷ ಲಕ್ಷ ರೂ. ಡೊನೇಷನ್ ವಸೂಲಿ ಮಾಡುವ ಪ್ರತಿಷ್ಠಿತ ಶಾಲೆಗಳು ಕೂಡ ಶಾಲಾ ವಾಹನಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಇವರಿಗಿರುವ ಕಾಳಜಿಗೆ ಸಾಕ್ಷಿಯಾಗಿದೆ’ ಎಂದು ಮತ್ತೋರ್ವ ಪೋಷಕರು ಸಿಡಿಮಿಡಿ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಇನ್ನಾದರೂ ಶಾಲಾ ಆಡಳಿತ ಮಂಡಳಿಗಳು ಹಾಗೂ ಆಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುವ ನಿರ್ಲಕ್ಷ್ಯ ಧೋರಣೆಯಿಂದ ಹೊರಬರಲಿವೆ ಎಂಬು ವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. ಆರ್‌ಟಿಒ, ಪೊಲೀಸ್ ಇಲಾಖೆಯೊಂದಿಗೆ ಡಿಡಿಪಿಐ ಸಭೆ ಶಾಲಾ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕಳೆದ ಕೆಲ ತಿಂಗಳುಗಳ ಹಿಂದೆ ಶಾಲಾ ಆಡಳಿತ ಮಂಡಳಿಯವರ ಸಭೆ ನಡೆಸಿ ಸೂಕ್ತ ಸಲಹೆ - ಸೂಚನೆ ನೀಡಲಾಗಿದೆ. ಹಾಗೆಯೇ ಇಲಾಖೆಯ ಕೆಳಹಂತದ ಅಧಿಕಾರಿಗಳ ಸಭೆ ನಡೆಸಿ, ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ನೀಡಿ ಎಂದು ಹೇಳಲಾಗಿದೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ (ಡಿ.ಡಿ.ಪಿ.ಐ.) ಮಚಾದೋರವರು ತಿಳಿಸಿದ್ದಾರೆ.
ಶಾಲೆಯವರ ಲೋಪದೋಷ ಪ್ರಶ್ನಿಸಿದರೆ ಎಲ್ಲಿ ತಮ್ಮ ಮಕ್ಕಳಿಗೆ ಶಾಲೆಗಳಲ್ಲಿ ತೊಂದರೆಯಾಗಲಿದೆಯೋ ಎಂಬ ಏಕೈಕ ಕಾರಣದಿಂದ ಬಹುತೇಕ ಪೋಷಕರು ಶಾಲಾ ಆಡಳಿತ ಮಂಡಳಿಯವರನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಯವರು ಏನು ಮಾಡುತ್ತಿದ್ದಾರೆ? ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೇಕೆ? ಏನಾದರು ದುರಂತ ಸಂಭವಿಸಿದ ನಂತರವಷ್ಟೇ ಈ ಇ ಾಖೆ ಯವರು ಕಾರ್ಯಪ್ರವೃತ್ತರಾಗಬೇಕೇ? ದುರಂತಕ್ಕೆ ಆಸ್ಪದವಾಗದಂತೆ ನಿರಂತರ ಎಚ್ಚರಿಕೆಯ ಕ್ರಮಗಳನ್ನು ಈ ಇಲಾಖೆಯವರು ಕೈಗೊಳ್ಳಬೇಕಲ್ಲವೇ? ಮುಗ್ಧ ಮಕ್ಕಳ ಜೀವಗಳೊಂದಿಗೆ ಆಟವಾಡಬಾರದಲ್ಲವೇ? ಪೋಷಕರ ಮನಸ್ಥಿತಿಯನ್ನು ಸಂಬಂಧಿಸಿದ ಇಲಾಖೆಯವರಾಗಲಿ ಅಥವಾ ಶಾಲಾ ಆಡಳಿತ ಮಂಡಳಿಯವರಾಗಲಿ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?’ ನಾಗರತ್ನಾ ಗೃಹಿಣಿ ಸ್ಪೀಡ್ ಗೌರ್ನರ್, ಸಿ.ಸಿ. ಕ್ಯಾಮರಾ,
ಜಿಪಿಎಸ್ ವ್ಯವಸ್ಥೆಯೇ ಇಲ್ಲ
ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ವೇಗ ನಿಯಂತ್ರಿುವ ಸ್ಪೀಡ್ ಗೌರ್ನರ್, ಸಿ. ಸಿ. ಕ್ಯಾಮರಾ, ಜಿಪಿಎಸ್ ತಂತ್ರಜ್ಞಾನ ಅಳವಡಿಕೆ, ಪ್ರತ್ಯೇಕ ಸಿಬ್ಬಂದಿ ನಿಯೋಜನೆ, ಪೋಷಕರೊಂದಿಗೆ ಸಭೆ ನಡೆಸುವುದು ಸೇರಿದಂತೆ ಹತ್ತು ಹಲವು ಮಾರ್ದರ್ಶಿ ಸೂತ್ರಗಳನ್ನು ಸರಕಾರ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಆದರೆ ಮುಕ್ಕಾಲುಪಾಲು ಶಾಲಾ ವಾಹನಗಳಲ್ಲಿ ಈ ನಿಯಮಗಳ ಪಾಲನೆಯಾಗುತ್ತಿಲ್ಲ. ಶಾಲಾ ವಾಹನ ಸುರಕ್ಷತೆಯ ಬಗ್ಗೆಯೇ ಶಿಕ್ಷಣ ಇಲಾಖೆ, ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಯವರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸರಕಾರ ನಿರ್ದೇಶನಗಳನ್ನು ನೀಡಿದೆ. ಆದರೆ ಈ ನಿಯಮಗಳ ಪರಿಪಾಲನೆ ಸಮರ್ಪಕವಾಗಿ ನಡೆಯುತ್ತಿಲ್ಲವಾಗಿದೆ.
ಕುರಿಮಂದೆಗಳಂತಾಗಿವೆ ಶಾಲಾ ವಾಹನ
ಮಕ್ಕಳನ್ನು ಕರೆದೊಯ್ಯುವ ಕೆಲ ಖಾಸಗಿ ವಾಹನಗಳಲ್ಲಿಯೂ ಮಕ್ಕಳನ್ನು ಕುರಿಮಂದೆಗಳಂತೆ ತುಂಬಿಕೊಂಡು ಹೋಗಲಾಗುತ್ತಿದೆ. ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆಯೂ ಮಾಡುತ್ತಿಲ್ಲವಾಗಿದೆ. ಇದು ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದೆ. ಜೊತೆಗೆ ಕೆಲವರು ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಗಮನಹರಿಸಬೇಕಾಗಿದೆ’ ಎಂದು ಪೋಷಕರೊಬ್ಬರು ಮನವಿಯಾಗಿದೆ.







