ಐರೋಪ್ಯ ಶಿಕ್ಷಣ ಮನುಷ್ಯರನ್ನು ಧರ್ಮದ ಶತ್ರುಗಳನ್ನಾಗಿಸುತ್ತಿದೆ: ಮೌಲಾನ ನದ್ವಿ
ರಾಷ್ಟ್ರೀಯ ಶೈಕ್ಷಣಿಕ ವಿಚಾರಗೋಷ್ಠಿ

ಭಟ್ಕಳ, ಡಿ.21: ಪ್ರಸಕ್ತ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಕಟುವಾಗಿ ವಿಮರ್ಶಿಸಿದ ಆಲ್‌ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲಾನಾ ಸೈಯದ್ ಮುಹಮ್ಮದ್ ರಾಬೆಅ ಹಸನಿ ನದ್ವಿ, ಐರೋಪ್ಯ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆ ಮನುಷ್ಯರನ್ನು ಧರ್ಮದ ಶತ್ರುಗಳನ್ನಾಗಿ ರೂಪಿಸುತ್ತಿದೆ ಎಂದು ಹೇಳಿದರು.
ಅವರು ಬುಧವಾರ ಇಲ್ಲಿನ ಅಲಿ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಶೈಕ್ಷಣಿಕ ವಿಚಾರ ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
ಶಿಕ್ಷಣ ಪಠ್ಯಕ್ರಮದಲ್ಲಿನ ಉಢಾಳತನವು ಪ್ರಸ್ತುತ ಕೆಡುಕು ಗಳಿಗೆ ಕಾರಣವಾಗುತ್ತಿದ್ದು, ನವ ಪೀಳಿಗೆಯ ಮನಸ್ಸುಗಳನ್ನು ಕಲುಷಿತಗೊಳಿಸುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನವ ಪೀಳಿಗೆಯಲ್ಲಿ ಇಸ್ಲಾಮಿನ ನೈಜ ಚಿಂತನೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಅವರನ್ನು ದೇಶದ ಅತ್ಯುನ್ನತ ನಾಗರಿಕರನ್ನಾಗಿ ರೂಪಿಸುವಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ವಿಚಾರಗೋಷ್ಠಿಯಲ್ಲಿ ಅಭಿಪ್ರಾಯಪಟ್ಟ ಶಿಕ್ಷಣ ತಜ್ಞರು, ನವ ಪೀಳಿಗೆಯ ಮನಸ್ಸುಗಳಲ್ಲಿ ಇಸ್ಲಾಮ್ ಕುರಿತಂತೆ ತಪ್ಪು ಕಲ್ಪನೆಗಳು ಜನ್ಮ ತಾಳುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಶಿಕ್ಷಣ ತಜ್ಞ ಡಾ.ವಲಿ ರಹ್ಮಾನಿ, ಲಖ್ನೋ ನದ್ವತುಲ್‌ಉಲೆಮಾದ ವ್ಯವಸ್ಥಾಪಕ ಮೌಲಾನ ವಾಝ್ಹೆರಶೀದ್ ನದ್ವಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಾದುಲ್ಲಾ ಹುಸೈನ್ ಸೇರಿದಂತೆ ದೇಶದ ವಿವಿಧ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾನಿಲಯ ಹಾಗೂ ಮದ್ರಸಾಗಳ 250ಕ್ಕೂ ಹೆಚ್ಚು ಶಿಕ್ಷಣ ತಜ್ಞರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.







