ಕಿಡ್ನಿಗೆ ಧರ್ಮವಿಲ್ಲ ಎಂಬುದು ಮತ್ತೊಮ್ಮೆ ಸಾಬೀತು!
ಮುಸ್ಲಿಮ್ ಮಹಿಳೆಗೆ ಕಿಡ್ನಿ ದಾನ ಮಾಡಿದ ಕ್ರೈಸ್ತ ಪಾದ್ರಿ

ಕೊಚ್ಚಿ, ಡಿ.22: ಕೇರಳದ ವಯನಾಡ್ ಜಿಲ್ಲೆಯ ಚೀಂಗೇರಿಯಲ್ಲಿರುವ ಸೈಂಟ್ ಮೇರೀಸ್ ಜೇಕೊಬೈಟ್ ಸಿರಿಯನ್ ಚರ್ಚ್ ಇಲ್ಲಿನ ಪಾದ್ರಿ 39 ವರ್ಷದ ಶಿಬುಕುಟ್ಟಿ ಪರಿಚೆಲ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 29 ವರ್ಷದ ಕೈರುನ್ನೀಸಾ ಎಂಬ ಮುಸ್ಲಿಮ್ ಮಹಿಳೆಯೊಬ್ಬಳಿಗೆ ತಮ್ಮ ಕಿಡ್ನಿಯೊಂದನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಿಡ್ನಿ ಶಸ್ತ್ರಚಿಕಿತ್ಸೆ ಮತ್ತು ಕಸಿಯನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆಸಲಾಯಿತು.
ತ್ರಿಶ್ಶೂರಿನವರಾದ ಕೈರುನ್ನೀಸಾ ಕಿಡ್ನಿ ಫೆಡರೇಶನ್ ಆಫ್ ಇಂಡಿಯಾದಲ್ಲಿ ನೋಂದಾಯಿಸಲ್ಪಟ್ಟ ಕಿಡ್ನಿ ದಾನ ಮಾಡಲಿಚ್ಛಿಸುವವರಿಂದ ಕಿಡ್ನಿ ಪಡೆಯಲುಆಯ್ಕೆಯಾಗಿದ್ದರು. ಸ್ವತಹ ತಮ್ಮ ಒಂದು ಕಿಡ್ನಿಯನ್ನು ಕೆಲ ವರ್ಷಗಳ ಹಿಂದೆ ದಾನ ಮಾಡಿದ್ದ ಕ್ರೈಸ್ತ ಪಾದ್ರಿ ಡೇವಿಸ್ ಚಿರಾಮೆಲ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕೈರುನ್ನೀಸಾ ಹಲವಾರು ಬಾರಿ ಡಯಾಲಿಸಿಸ್‌ಗೆ ಒಳಗಾಗಿದ್ದಳು. ಆಕೆಯ 56 ವರ್ಷದ ತಾಯಿ ತನ್ನ ಮಗಳಿಗೆ ತನ್ನ ಕಿಡ್ನಿ ದಾನ ಮಾಡಲು ಸಿದ್ಧರಿದ್ದರೂ ರಕ್ತ ಗುಂಪು ಹೊಂದಿಕೆಯಾಗಿರಲಿಲ್ಲ. ಆದರೆ ಕುಟ್ಟಿಪರಿಚೆಲ್ ಅವರ ರಕ್ತ ಗುಂಪು ಹೊಂದಿಕೆಯಾಗಿದ್ದರಿಂದ ಅವರಿಗೆ ಕಿಡ್ನಿ ದಾನ ಮಾಡಲು ಅನುಕೂಲವಾಗಿತ್ತು. ಕಿಡ್ನಿ ದಾನಿಯೂ ಕಿಡ್ನಿ ಪಡೆದಾಕೆಯೂ ಆರೋಗ್ಯದಿಂದಿದ್ದಾರೆ.
ಕಿಡ್ನಿ ದಾನಿ ಆಸ್ಪತ್ರೆಯಿಂದ ನಾಲು ದಿನಗಳಲ್ಲಿ ಬಿಡುಗಡೆ ಹೊಂದಲಿದ್ದರೆ, ಕೈರುನ್ನೀಸಾ ಅವರು ಒಂದು ವಾರದ ನಂತರ ಮನೆಗೆ ಹಿಂದಿರುಗಲಿದ್ದಾರೆ.





