ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ರಾಜೀನಾಮೆ

ಹೊಸದಿಲ್ಲಿ,ಡಿ.22: ಅಚ್ಚರಿದಾಯಕ ಬೆಳವಣಿಗೆಯೊಂದರಲ್ಲಿ ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ನಜೀಬ್ ಜಂಗ್ ಅವರು ಗುರುವಾರ ತನ್ನ ಹುದ್ದೆಗೆ ರಾಜೀನಾಮೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದಾರೆ. ಅವರ ದಿಢೀರ್ ನಿರ್ಧಾರಕ್ಕೆ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ.
ಜಂಗ್ ತನ್ನ ರಾಜೀನಾಮೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ ಎಂದು ಅವರ ಕಚೇರಿಯು ತಿಳಿಸಿದೆ. ರಾಜೀನಾಮೆಗೆ ಕಾರಣವನ್ನು ಉಲ್ಲೇಖಿಸುವ ಗೋಜಿಗೆ ಅದು ಹೋಗಿಲ್ಲ. ಮಾಜಿ ಐಎಎಸ್ ಅಧಿಕಾರಿ ಜಂಗ್(65) 2013,ಜು.9ರಂದು ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ತನ ಅಧಿಕಾರಾಧಿಯಲ್ಲಿ ಎಲ್ಲ ನೆರವು ಮತ್ತು ಸಹಕಾರ ನೀಡಿದ್ದಕ್ಕಾಗಿ ಜಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ ಎಂದು ರಾಜನಿವಾಸವು ಹೊರಡಿಸಿರುವ ಪ್ರಕಟಣೆಯು ತಿಳಿಸಿದೆ.
ತನ್ನ ಬಗ್ಗೆ ತೋರಿದ ಪ್ರೀತಿಗಾಗಿ ದಿಲ್ಲಿಯ ಜನರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಕಳೆದ ಎರಡು ವರ್ಷಗಳ ಕಾಲ ತನ್ನೊಂದಿಗೆ ಕಾರ್ಯ ನಿರ್ವಹಿಸಿದ್ದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರಿಗೂ ಜಂಗ್ ವಂದನೆಗಳನ್ನು ಸಲ್ಲಿಸಿದ್ದಾರೆ.
ಜಂಗ್ ಮತ್ತು ಕೇಜ್ರಿವಾಲ್ ಸರಕಾರದ ನಡುವಿನ ಸಂಬಂಧ ಹಾವು-ಮುಂಗುಸಿ ಯಂತಿತ್ತು. ಕೇಂದ್ರದ ಸೂಚನೆಯ ಮೇರೆಗೆ ಜಂಗ್ ತನ್ನ ಹಿತಾಸಕ್ತಿಗಳ ವಿರುದ್ಧ ಕಾರ್ಯಾಚರಿಸುತ್ತಿದ್ದಾರೆ ಎಂದೂ ಆಪ್ ಸರಕಾರವು ಆರೋಪಿಸಿತ್ತು.
ನಗರದದಾದ್ಯಂತ ಮೊಹಲ್ಲಾ ಕ್ಲಿನಿಕ್‌ಗಳ ಸ್ಥಾಪನೆ ಸೇರಿದಂತೆ ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಂಗ್ ತಡೆದಿದ್ದಾರೆ ಎಂದು ಆಪ್ ಸರಕಾರ ಆಪಾದಿಸಿತ್ತು.
ದಿಲ್ಲಿಯ ಆಡಳಿತದಲ್ಲಿ ಲೆಫ್ಟಿನಂಟ್ ಗವರ್ನರ್ ಅವರೇ ಮುಖ್ಯರಾಗಿದ್ದಾರೆ ಎಂದು ಈ ವರ್ಷದ ಆಗಸ್ಟ್ 4ರಂದು ದಿಲ್ಲಿ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಇದನ್ನು ಕೇಜ್ರಿವಾಲ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ದಿಲ್ಲಿ ಸರಕಾರವು ಸೂಕ್ತವಾಗಿ ಕಾರ್ಯಗಳನ್ನು ನಿರ್ವಹಿಸುವಂತಾಗಲು ಅದು ಕೆಲವು ಅಧಿಕಾರಗಳನ್ನು ಹೊಂದಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಡಿ.14ರಂದು ಹೇಳಿತ್ತು.







