ರಾಘವೇಶ್ವರ ಭಾರತಿ ಸ್ವಾಮಿ ಬೆಂಬಲಿಗರ ಹೆಸರಿನಲ್ಲಿ ವಿ.ಎಸ್.ಉಗ್ರಪ್ಪಗೆ ಗುಂಡಿಕ್ಕಿ ಕೊಲ್ಲುವ ಬೆದರಿಕೆ

ಬೆಂಗಳೂರು, ಡಿ. 22: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧದ ಪ್ರಕರಣಗಳ ಸಂಬಂಧದ ಸಿಐಡಿ ತನಿಖೆ ವಿಳಂಬ ಸರಿಯಲ್ಲ ಎಂಬ ಹೇಳಿಕೆ ನೀಡಿದ್ದ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪರಿಗೆ, ಶ್ರೀಗಳ ಬೆಂಬಲಿಗರೆನ್ನಲಾದ ಕೆಲವರು ಸಾಮಾಜಿಕ ಜಾಣತಾಣಗಳಲ್ಲಿ ‘ಗುಂಡಿಟ್ಟು ಕೊಲ್ಲುವ’ ಬೆದರಿಕೆವೊಡ್ಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಗೆ ಜೀವ ಬೆದರಿಕೆ ಹಾಕಿರುವ ಸಂಬಂಧ ಶೀಘ್ರದಲ್ಲೆ ಪೊಲೀಸರಿಗೆ ದೂರು ನೀಡುವೆ. ಅಲ್ಲದೆ, ಈ ಸಂಬಂಧ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆಯುವೆ ಎಂದು ಹೇಳಿದರು.
ವಿದ್ಯೆ ವಿನಯವನ್ನು ಕಲಿಸಬೇಕು, ವಿನಯದಿಂದ ಗೌರವಿಸಿಕೊಳ್ಳಬೇಕು. ಆದರೆ, ವಿದ್ಯಾವಂತ ವರ್ಗ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮತ್ತು ತನ್ನ ನೇತೃತ್ವದ ಸಮಿತಿ ಹಾಗೂ ರಾಜ್ಯ ಸರಕಾರದ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ನೋಡಿದರೆ ಅವರ ವಿಕೃತ ಮನಸ್ಸಿಗೆ ಕನ್ನಡಿ ಹಿಡಿದಿದೆ ಎಂದು ಹೇಳಿದರು.
ವಿಕೃತ ಸಂದೇಶಗಳ ಮೂಲಕ ಮತೀಯ, ಜಾತೀಯ ಭಾವನೆ ಕೆರಳಿಸಿರುವುದಲ್ಲದೆ, ಸಮಾಜದ ಸ್ವಾಸ್ಥವನ್ನು ಹದಗೆಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ವಿ.ಎಸ್.ಉಗ್ರಪ್ಪ, ರಾಘವೇಶ್ವರ ಭಾರತಿ ಸ್ವಾಮೀಜಿ ತಮ್ಮ ಬೆಂಬಲಿಗರಿಗೆ ಬುದ್ಧಿ ಕಲಿಸಬೇಕೆಂದು ಹೇಳಿದರು.
ಡಿ.20ರಂದು ‘ಅಖಿಲ ಕರ್ನಾಟಕ ಹವ್ಯಕ ಒಕ್ಕೂಟ’ ಮನವಿ ಸ್ವೀಕರಿಸಿ, ಸಿಐಡಿ ತನಿಖೆ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಚಾರ್ಜ್‌ಶೀಟ್ ಅಥವಾ ‘ಬಿ’ ರಿರ್ಪೋಟ್ ಸಲ್ಲಿಸಿ ಎಂದು ಸಿಐಡಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದೆ.
ಇದೇ ಕಾರಣಕ್ಕೆ ತನ್ನ ವಿರುದ್ಧ ಇಷ್ಟರಮಟ್ಟಿಗೆ ವಿಕೃತತೆ ಪ್ರದರ್ಶಿಸಿರುವ ರಾಘವೇಶ್ವರ ಭಾರತಿ ಸ್ವಾಮೀಜಿ ಬೆಂಬಲಿಗರೆನ್ನಲಾದ ಇವರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಮಹಿಳೆಯರ ಮೇಲೆ ಎಷ್ಟರಮಟ್ಟಿನ ಕೌರ್ಯ ಮೆರೆದಿರಬಹುದು ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಂತ ಅಸಹ್ಯ ಮತ್ತು ಅಸಭ್ಯ ರೀತಿಯಲ್ಲಿ ವಿಕೃತ ಪದಗಳನ್ನು ಬಳಸಿ ತನ್ನ ಮತ್ತು ತನ್ನ ನೇತೃತ್ವದ ಸಮಿತಿ ಹಾಗೂ ಸರಕಾರವನ್ನು ಅವಹೇಳನ ಮಾಡಲಾಗಿದೆ. ಇದು ಸೈಬರ್ ಅಪರಾಧ ಕಾಯ್ದೆಯ ಉಲ್ಲಂಘನೆಯಾಗಿದೆ. ಆದುದರಿಂದ ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
‘ಇಂಥವರನ್ನಾ ಗುಂಡಿಟ್ಟು ಕೊಲ್ಲಬೇಕು. ಆಗ ಮಠದ ತಂಟೆಗೆ ಬರುವುದಿಲ್ಲಾ, ಒಬ್ಬರಿಗೆ ಶಿಕ್ಷೆ ನೀಡಿದರೆ ಬೇರೆಯವರು ಎಚ್ಚೆತ್ತುಕೊಳ್ಳುತ್ತಾರೆ, ಮಠಗಳ ತಂಟೆಗೆ ಬರುವುದಿಲ್ಲ, ಉಗ್ರನ ಮೇಲೆ ಸರ್ಜಿಕಲ್ ಸ್ಟ್ರೈಕ್ ಬ್ರಹ್ಮ ಸಮಾಜ ಮಾಡಬೇಕು, ಉಗ್ರಪ್ಪನಿಗೆ ಅವನಪ್ಪ ಯಾರೆಂದು ಗೊತ್ತಾ.. ಕೇವಲ ಬ್ರಾಹ್ಮಣ ಮಠಗಳ ಮೇಲೆ ಕಣ್ಣು ಹಾಕುತ್ತಿರುವ ದರಿದ್ರ ಅಹಿಂದ ಪರ ಸರಕಾರ ಒಕ್ಕಲಿಗರ, ಲಿಂಗಾಯತರ ಮಠಗಳು, ಚರ್ಚು, ಮಸೀದಿಗಳನ್ನು ಮುಟ್ಟುವ ಧೈರ್ಯ ತೋರಿಸಲಿ. ಷಂಡ ಸರಕಾರ, ಅದಕ್ಕೊಬ್ಬ ಶಿಖಂಡಿ ವಕ್ತಾರ..’
ಸಾಮಾಜಿಕ ಜಾಲತಾಣ ಸಂದೇಶಗಳು







