ನೋಟು ರದ್ದತಿ ಆದ ಬೆನ್ನಿಗೇ ಅಮಿತ್ ಶಾ ನಿರ್ದೇಶಕರಾದ ಸಹಕಾರಿ ಬ್ಯಾಂಕಿಗೆ ಜಮೆಯಾಯಿತು 500 ಕೋಟಿ ರೂ.!

ಅಹ್ಮದಾಬಾದ್,ಡಿ.22: ನೋಟು ರದ್ದತಿ ಪ್ರಕಟಣೆ ಹೊರಬಿದ್ದಿದ್ದ ನ.8 ಮತ್ತು ನ.12ರ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಇಲ್ಲಿಯ ಆಶ್ರಮ ರಸ್ತೆಯಲ್ಲಿರುವ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ 500 ಕೋ.ರೂ.ಗಳಷ್ಟು ಬೃಹತ್ ಮೊತ್ತದ ಹಳೆಯ ನೋಟುಗಳು ಜಮೆಯಾಗಿದ್ದವು ಎನ್ನಲಾಗಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ(ಇಡಿ) ತನಿಖೆಯನ್ನು ನಡೆಸುತ್ತಿವೆ.
ಡಿ.19ರಂದು ಈ ಸಹಕಾರಿ ಬ್ಯಾಂಕಿನ ಮೇಲಿನ ಅಧಿಕಾರಿಗಳ ದಾಳಿ ಅಥವಾ ಶೋಧ ಕಾರ್ಯಾಚರಣೆ ತಮಿಳುನಾಡು ಮುಖ್ಯಕಾರ್ಯದರ್ಶಿ ಪಿ.ರಾಮಮಮೋಹನ್ ರಾವ್ ಅವರ ನಿವಾಸದ ಮೇಲೆ ದಾಳಿಯ ಸಂದರ್ಭ ಆದಂತೆ ಸುದ್ದಿಯಾಗಿಲ್ಲ. ಮಾಧ್ಯಮಗಳೇ ವೌನವಾಗಿವೆಯೇ ಅಥವಾ ಸುದ್ದ ಹೊರಬೀಳದಂತೆ ಮಾಡಲಾಗಿತ್ತೇ?
ಆದರೆ ಔಟ್‌ಲುಕ್ ಹಿಂದಿ ಈ ಬಗ್ಗೆ ವರದಿ ಮಾಡಿದೆ. 500 ಕೋ.ರೂ.ಗಳ ಪೈಕಿ ಹೆಚ್ಚಿನ ಭಾಗ ನೋಟು ರದ್ದತಿಯನ್ನು ಪ್ರಕಟಿಸಲಾದ ರಾತ್ರಿಯೇ ಜಮೆಯಾಗಿದೆ. ಈ ಬ್ಯಾಂಕು 190 ಶಾಖೆಗಳನ್ನು ಹೊಂದಿದೆಯಾದರೂ ಇಷ್ಟೊಂದು ದೊಡ್ಡ ಮೊತ್ತ ಜಮೆಯಾಗಿರುವುದು ಇಲ್ಲಿಯ ಆಶ್ರಮ ರಸ್ತೆಯಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಮಾತ್ರ. ನೋಟು ರದ್ದತಿ ಪ್ರಕಟಗೊಂಡ ಬೆನ್ನಿಗೇ ಹಣ ಈ ಬ್ಯಾಂಕಿಗೆ ಹರಿದು ಬರತೊಡಗಿತ್ತು.
ಈ ಬ್ಯಾಂಕಿನ ಹೆಚ್ಚಿನ ಠೇವಣಿದಾರರು/ಗ್ರಾಹಕರು ಸಣ್ಣ ವ್ಯಾಪಾರಿಗಳು ಮತ್ತು ರೈತರೇ ಆಗಿದ್ದಾರೆ. ಇದು 500 ಕೋ.ರೂ.ಗಳಷ್ಟು ದೊಡ್ಡ ಮೊತ್ತ ಎಲ್ಲಿಂದ ಬ್ಯಾಂಕಿಗೆ ಬಂದಿತ್ತು ಎಂಬ ಬಗ್ಗೆ ಶಂಕೆಗೆ ಪುಷ್ಟಿ ನೀಡಿದೆ. ಬ್ಯಾಂಕಿನಲ್ಲಿ ಅಳವಡಿಸಲಾದ ಸಿಸಿಟಿವಿ ಫೂಟೇಜ್‌ಗಳನ್ನೂ ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಗುಜರಾತಿನಲ್ಲಿಯ ವಿವಿಧ ಸಹಕಾರಿ ಬ್ಯಾಂಕುಗಳಲ್ಲಿಯೂ ಇಂತಹ ಅಕ್ರಮ ಹಣ ತುಂಬಿಹೋಗಿದೆ.
ಬಿಜೆಪಿಯೊಂದಿಗೆ ನಿಕಟವಾಗಿರುವವರು ನೋಟು ರದ್ದತಿಯ ಬಳಿಕ ಭಾರೀ ಪ್ರಮಾಣದ ಹಳೆಯ ನೋಟುಗಳನ್ನು ಸಹಕಾರಿ ಬ್ಯಾಂಕುಗಳಿಗೆ ಜಮಾ ಮಾಡಿರಬಹುದು ಎನ್ನುವುದನ್ನು ಇದು ಸೂಚಿಸುತ್ತಿದೆ. ರಾಜ್ಯದಲ್ಲಿಯ 18 ಸಹಕಾರಿ ಬ್ಯಾಂಕುಗಳ ಪೈಕಿ 17 ಬ್ಯಾಂಕುಗಳು ಬಿಜೆಪಿಯ ಆಡಳಿತದಲ್ಲಿವೆ. ಗುಜರಾತಿನ ಸಚಿವ ಶಂಕರಭಾಯಿ ಚೌಧರಿ ಅವರು ಅಧ್ಯಕ್ಷರಾಗಿರುವ ಸಹಕಾರಿ ಬ್ಯಾಂಕಿನಲ್ಲಿ 200 ಕೋ.ರೂ.ಗಳ ಹಳೆಯ ನೋಟುಗಳು ಜಮೆಯಾಗಿವೆ.
ನೋಟು ರದ್ದತಿಯು ಗುಜರಾತಿನಲ್ಲಿ ತನ್ನ ಅಧೀನದಲ್ಲಿರುವ ಸಹಕಾರಿ ಬ್ಯಾಂಕುಗಳ ಮೂಲಕ ತನ್ನ ಕಪ್ಪುಹಣವನ್ನು ಬಿಳಿಯಾಗಿಸಲು ಬಿಜೆಪಿಗೆ ಅವಕಾಶ ಕಲ್ಪಿಸುವ ಷಡ್ಯಂತ್ರವಾಗಿತ್ತೇ? ಇದೇ ನೋಟು ರದ್ದತಿ ಕೇರಳ ಮತ್ತು ಇತರ ರಾಜ್ಯಗಳಲ್ಲಿಯ ಸಹಕಾರಿ ಬ್ಯಾಂಕುಗಳನ್ನು ವಿನಾಶದತ್ತ ತಳ್ಳುತ್ತಿದೆ.
ಆರ್‌ಬಿಐ ನಿರ್ದೇಶನದಂತೆ ಐಟಿ ಇಲಾಖೆ ಮತ್ತು ಇಡಿ ಗುಜರಾತಿನಲ್ಲಿಯ ಶಂಕಿತ ಸಹಕಾರಿ ಬ್ಯಾಂಕುಗಳ ಬಗ್ಗೆ ತನಿಖೆಯನ್ನು ಆರಂಭಿಸಿವೆ.ಇಡಿ ಅಧಿಕಾರಿಗಳು ಸೋಮವಾರ ಆಶ್ರಮ ರಸ್ತೆಯಲ್ಲಿರುವ ಜಿಲ್ಲಾ ಸಹಕಾರಿ ಬ್ಯಾಂಕೊಂದರ ಶಾಖೆಯ ಮೇಲೆ ದಾಳಿ ನಡೆಸಿ ಏಳು ಗಂಟೆಗಳ ಕಾಲ ಶೋಧ ಕಾರ್ಯಾಛರಣೆ ನಡೆಸಿದ್ದಾರೆ ಮತ್ತು ಕೆಲವು ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ ಎಂದು ಅಹ್ಮದಾಬಾದ್ ಮಿರರ್ ಹೇಳಿದೆ.
ಅಮಿತ್ ಶಾ ಬಾಂಕಿನ ನಿರ್ದೇಶಕರಲ್ಲೊಬ್ಬರಾಗಿದ್ದಾರೆ ಎಂದು ಅಹ್ಮದಾಬಾದ್ ಜಿಲ್ಲಾ ಸಹಕಾರಿ(ಎಡಿಸಿ) ಬ್ಯಾಂಕಿನ ವೆಬ್‌ಸೈಟ್ ಹೇಳುತ್ತದೆ. ಎಡಿಸಿ ಬ್ಯಾಂಕಿನ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆದಿರುವುದನ್ನು ಇಡಿ ಅಧಿಕಾರಿಯೋರ್ವರು ದೃಢ ಪಡಿಸಿದ್ದಾರೆ.
ನೋಟು ರದ್ದತಿಯ ಬಳಿಕ ಇದು ಎಡಿಸಿ ಬ್ಯಾಂಕಿನಲ್ಲಿ ಇಡಿ ಅಧಿಕಾರಿಗಳು ನಡೆಸಿರು ವ ಎರಡನೇ ಶೋಧ ಕಾರ್ಯಾಚರಣೆಯಾಗಿದೆ. ಶೋಧ ಕಾರ್ಯಾಚರಣೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಬ್ಯಾಂಕಿನ ಅಧಿಕಾರಿಗಳು, ತಾವು ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ನೋಟು ರದ್ದತಿಯ ಬಳಿಕ ಸಹಕಾರಿ ಬ್ಯಾಕುಗಳು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ಆರ್‌ಬಿಐ ನಿಷೇಧಿಸಿತ್ತು. ದೇಶಾದ್ಯಂತ ಇತರ ಎಲ್ಲ ಸಹಕಾರಿ ಬ್ಯಾಂಕುಗಳು ಸಂಕಷ್ಟದಲ್ಲಿರುವಾಗ ಈ ಬಾಂಕ್ಯು ಮಾತ್ರ ನಿಷೇಧದಿಂದ ಹೇಗೆ ತಪ್ಪಿಸಿಕೊಂಡಿತ್ತು? ಬ್ಯಾಂಕಿನ ಮೇಲೆ ಮೊದಲ ಬಾರಿ ನಡೆದಿದ್ದ ದಾಳಿಯನ್ನು ಮಾಧ್ಯಮಗಳು ವರದಿ ಮಾಡಿರಲೇ ಇಲ್ಲ. ಆಡಳಿತ ಬಿಜೆಪಿಯ ನಿಕಟವರ್ತಿಗಳು ಬೃಹತ್ ಮೊತ್ತವನ್ನು ಜಮಾ ಮಾಡಲು ಎಡಿಸಿ ಬ್ಯಾಂಕಿನ ಹೊರಗೆ ಸರದಿ ಸಾಲಿನಲ್ಲಿ ನಿಂತಿರುವ ವೀಡಿಯೊ ಸಾಕ್ಷ ತನ್ನ ಬಳಿಯಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರದೊಂದಿಗೆ ಮಾಜಿ ಬಿಜೆಪಿ ಶಾಸಕ ಯತಿನ್ ಓಝಾ ಅವರು ಸುದ್ದಿ ಜಾಲತಾಣಗಳಲ್ಲಿ ಸದ್ದು ಮಾಡಿದ್ದರಾದರೂ ಸ್ಥಳೀಯ ಮಾಧ್ಯಮಗಳಿಗೆ ಇದೊಂದು ಸುದ್ದಿಯೇ ಆಗಿರಲಿಲ್ಲ. ‘ನರೇಂದ್ರ ಭಾಯಿ,ನೀವು ಜನರನ್ನು ಮೂರ್ಖರನ್ನಾಗಿಸಿದ್ದೀರಿ’ ಎನ್ನುತ್ತಾರೆ ಓಝಾ.
ನ.8ರಂದು ನೋಟು ರದ್ದತಿಯನ್ನು ಘೋಷಿಸಲು ಮೋದಿ ಮತ್ತು ಅವರ ಸಂಪುಟ ‘ರಹಸ್ಯ’ನಿರ್ಧಾರವನ್ನು ತೆಗೆದುಕೊಳ್ಳುವ ಕೆಲವೇ ಗಂಟೆಗಳ ಮೊದಲು ಬಿಜೆಪಿಯ ಒಂದೇ ಬ್ಯಾಂಕ್ ಖಾತೆಯಲ್ಲಿ ಒಂದು ಕೋ.ರೂ.ಜಮೆಯಾಗಿದ್ದನ್ನು ಈ ಹಿಂದೆ ಕೋಲ್ಕತಾದ ಗಣಶಕ್ತಿ ಪತ್ರಿಕೆ ಬಯಲಿಗೆಳೆದಿತ್ತು.
ಪ.ಬಂಗಾಲದಲ್ಲಿ ಹೀಗೆ ಆಗಿದ್ದರೆ ಉಳಿದ ರಾಜ್ಯಗಳಲ್ಲಿ ಪಕ್ಷದ ಬ್ಯಾಂಕ್ ಖಾತೆಗಳಲ್ಲಿ ಏನಾಗಿದೆ ಎಂಬ ಪ್ರಶ್ನೆಯನ್ನು ಆಗ ಕೇಳಲಾಗಿತ್ತು ಮತ್ತು ಅದಿನ್ನೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಅಂದ ಹಾಗೆ ಆರೆಸ್ಸೆಸ್‌ನಂತಹ ಕೇಸರಿ ಪರಿವಾರ ಸಂಘಟನೆಗಳ ಲೆಕ್ಕಪತ್ರಗಳು ಮತ್ತು ವ್ಯವಹಾರಗಳ ಬಗ್ಗೆ ಏನು? ಅವುಗಳಿಗೂ ನೋಟು ರದ್ದತಿಯ ಪೂರ್ವ ಸೂಚನೆಯಿತ್ತೇ ಮತ್ತು ಅವೂ ಇದರ ಲಾಭ ಪಡೆದುಕೊಂಡಿವೆಯೇ?







