ಅಶ್ವಿನ್ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ
ವಿರಾಟ್ ಕೊಹ್ಲಿ ಐಸಿಸಿ ಏಕದಿನ ತಂಡದ ನಾಯಕ* ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲ

ಹೊಸದಿಲ್ಲಿ, ಡಿ.22: ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2016ನೆ ಸಾಲಿನ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಐಸಿಸಿ ನಂ.1 ಟೆಸ್ಟ್ ಬೌಲರ್ ಆಗಿರುವ ಅಶ್ವಿನ್ ಈ ಪಶಸ್ತಿ ಪಡೆದಿರುವ ಭಾರತದ ಮೂರನೆ ಆಟಗಾರ. ಈ ಮೊದಲು 2004ರಲ್ಲಿ ರಾಹುಲ್ ದ್ರಾವಿಡ್ ಮತ್ತು 2010ರಲ್ಲಿ ಸಚಿನ್ ತೆಂಡುಲ್ಕರ್ ಈ ಪ್ರಶಸ್ತಿ ಪಡೆದಿದ್ದರು.
ಐಸಿಸಿ 2016ನೆ ಸಾಲಿನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ.
ಮಾರಿಸ್ ಎರಾಸ್ಮಸ್ ಐಸಿಸಿ ವರ್ಷದ ಅಂಪೈರ್ , ದಕ್ಷಿಣ ಆಫ್ರಿಕದ ಆಟಗಾರ ಕ್ವಿಂಟನ್ ಡಿ ಕಾಕ್ ವರ್ಷದ ಏಕದಿನ ಕ್ರಿಕೆಟಿಗ, ಬಾಂಗ್ಲಾದೇಶದ ಮುಸ್ತಾಫಿರ್ರಹ್ಮಾನ್ ಐಸಿಸಿ ಎಮರ್ಜಿಂಗ್ ಕ್ರಿಕೆಟರ್, ಕಾರ್ಲೊಸ್ ಬ್ರಾಥ್‌ವೈಟ್ ಐಸಿಸಿ ಟ್ವೆಂಟಿ-20 ವರ್ಷದ ಕ್ರಿಕೆಟಿಗ, ಅಫ್ಘಾನಿಸ್ತಾನದ ಮುಹಮ್ಮದ್ ಶಹಝಾದ್ ಐಸಿಸಿ ಅಸೋಸಿಯೇಟ್ ಕ್ರಿಕೆಟಿಗ , ನ್ಯೂಝಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸುಝಿ ಬಾಟೆಸ್ ಐಸಿಸಿ ಮಹಿಳಾ ಏಕದಿನ ಮತ್ತು ಟ್ವೆಂಟಿ-20ವರ್ಷದ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಶ್ವಿನ್ ಸೆ.15, 2015ರಿಂದ ಸೆ.20 2016ರ ತನಕ 8 ಟೆಸ್ಟ್‌ಗಳಲ್ಲಿ 48 ವಿಕೆಟ್ ಮತ್ತು 336 ರನ್ ಗಳಿಸಿದ್ದರು. ಭಾರತ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 3-0 ಮತ್ತು ವೆಸ್ಟ್‌ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಪಡೆದಿತ್ತು.
ಇದೇ ವೇಳೆ ಅಶ್ವಿನ್ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೂ, 27 ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯ ವಿರುದ್ಧ ಭಾರತ ತಂಡ 3-0 ಅಂತರದಲ್ಲಿ ಜಯ ಗಳಿಸಿತ್ತು. ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿತ್ತು. ತವರಿನಲ್ಲಿ ವರ್ಲ್ಡ್ ಟ್ವೆಂಟಿ-20ಯಲ್ಲಿ ಸೆಮಿಫೈನಲ್ ತಲುಪಿತ್ತು.
ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಒಟ್ಟು 28 ವಿಕೆಟ್‌ಗಳನ್ನು ಪಡೆದು ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದರು. 27 ವಿಕೆಟ್‌ಗಳನ್ನು ಪಡೆದ ರವೀಂದ್ರ ಜಡೇಜ ನಂ.2 ಸ್ಥಾನ ಗಿಟ್ಟಿಸಿಕೊಂಡಿದ್ದರು.
ಅಲಿಸ್ಟರ್ ಕುಕ್ ನಾಯಕತ್ವದ ಐಸಿಸಿ ಟೆಸ್ಟ್ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಐಸಿಸಿ ಏಕದಿನ ತಂಡದ ನಾಯಕ , ವೆಸ್ಟ್ ಇಂಡೀಸ್‌ನ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಟಫಾನಿ ಟೇಲರ್ ಐಸಿಸಿ ಮಹಿಳಾ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ವಿರಾಟ್ ಕೊಹ್ಲಿ ಐಸಿಸಿ ಏಕದಿನ ತಂಡದ ನಾಯಕರಾಗಿದ್ದಾರೆ.ಆದರೆ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗರಿಷ್ಠ ರನ್ ದಾಖಲಿಸಿದ ಮತ್ತು ಒಂದೇ ವರ್ಷ ಮೂರು ದ್ವಿಶತಕ ದಾಖಲಿಸಿದ ಕೊಹ್ಲಿ ಅವರನ್ನು ಟೆಸ್ಟ್ ತಂಡಕ್ಕೆ ಕಡೆಗಣಿಸಲಾಗಿದೆ.
ಐಸಿಸಿ ಟೆಸ್ಟ್ ವರ್ಷದ ತಂಡ 2016: ಅಲಿಸ್ಟರ್ ಕುಕ್(ನಾಯಕ), ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜೋ ರೂಟ್, ಆ್ಯಡಮ್ ವೋಗ್ಸ್, ಜೋನಿ ಬೈರ್‌ಸ್ಟೋವ್(ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಆರ್.ಅಶ್ವಿನ್, ರಂಗನಾ ಹೆರಾತ್, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇಯ್ನಾ ಮತ್ತು ಸ್ಟೀವ್ ಸ್ಮಿತ್(12ನೆ ಆಟಗಾರ).
ಐಸಿಸಿ ಏಕದಿನ ವರ್ಷದ ತಂಡ 2016: ವಿರಾಟ್ ಕೊಹ್ಲಿ (ನಾಯಕ): ಡೇವಿಡ್ ವಾರ್ನರ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಜೋಸ್ ಬಟ್ಲರ್, ಮಿಚೆಲ್ ಮಾರ್ಷ್, ರವೀಂದ್ರ ಜಡೇಜ, ಮಿಚೆಲ್ ಸ್ಟಾರ್ಕ್, ಕಾಗಿಸೊ ರಬಾಡ, ಸುನೀಲ್ ನರೇನ್, ಇಮ್ರಾನ್ ತಾಹಿರ್(12ನೆ ಆಟಗಾರ).
ಐಸಿಸಿ ಮಹಿಳಾ ವರ್ಷದ ತಂಡ 2016: ಸ್ಟಫಾನಿ ಟೇಲರ್(ನಾಯಕಿ), ಸುಝಿ ಬ್ಯಾಟೆಸ್, ರಸಚೇಲ್ ಪ್ರೀಸ್ಟ್ (ವಿಕೆಟ್ ಕೀಪರ್), ಸ್ಮತಿ ಮಂಧಾನ, ಮೆಗ್ ಲ್ಯಾನಿಂಗ್, ಎಲ್ಸೆ ಪೆರ್ರಿ , ಹೀದರ್ ನೈಟ್, ದಿಯೇಂದ್ರ ಡೊಟಿನ್, ಸುನೆ ಲೂಸ್, ಅನ್ಯಾ ಶ್ರಬ್ರ್ಸೋಲ್, ಲೆಯಾಗ್ ಕ್ಯಾಸ್ಪೆರ್ಕ್ ಮತ್ತು ಕಿಮ್ ಗ್ಯಾರ್ತ್(12 ನೆ ಆಟಗಾರ್ತಿ).
''ಇಂತಹ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿರುವುದು ನನ್ನ ಪಾಲಿಗೆ ನಿಜಕ್ಕೂ ಮಹಾ ಗೌರವ. ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್‌ರಂತಹ ಶ್ರೇಷ್ಠ ಆಟಗಾರರು ಪಡೆದಿರುವ ಪ್ರಶಸ್ತಿ ನನಗೂ ಲಭಿಸಿರುವುದಕ್ಕೆ ಸಂತೋಷವಾಗುತ್ತಿದೆ. ನಾನು ಮಾಡಿರುವ ಉತ್ತಮ ಸಾಧನೆಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಬಯಸುವೆ. ಕಳೆದ ಕೆಲವು ವರ್ಷಗಳು ನನಗೆ ಸಂತೋಷದಾಯಕವಾಗಿದ್ದವು. ಆದರೆ, ಈ ವರ್ಷ ತುಂಬಾ ವಿಶೇಷವಾದುದು. ನಾನು ಈವರ್ಷ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿರುವೆ. ನನ್ನ ಈ ಯಶಸ್ಸಿನ ಹಿಂದೆ ಹಲವು ಜನರ ಪರಿಶ್ರಮವೂ ಅಡಗಿದೆ. ಈ ಪ್ರಶಸ್ತಿಯನ್ನು ನನ್ನ ಕುಟುಂಬ ಸದಸ್ಯರಿಗೆ ಅರ್ಪಿಸುವೆ'
- ಆರ್. ಅಶ್ವಿನ್, ಭಾರತದ ಸ್ಪಿನ್ ಬೌಲರ್







