ಲಂಚ ಪ್ರಕರಣ: ಮೋದಿ ರಾಜೀನಾಮೆ ಕೊಡಲಿ, ಕೇಜ್ರಿವಾಲ್

ಹೊಸದಿಲ್ಲಿ,ಡಿ.22: ಪ್ರಧಾನಿ ನರೇಂದ್ರಮೋದಿ ವಿರುದ್ಧ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹಾರ, ಬಿರ್ಲಾ ಸಮೂಹಗಳಿಂದ ಲಂಚ ಪಡೆದಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದು,ಅವರು ರಾಜೀನಾಮೆ ನೀಡಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನವೆಂಬರ್ 15ರಂದು ದಿಲ್ಲಿವಿಧಾನಸಭೆಯ ಮುಂದಿಟ್ಟಿದ್ದೇವೆ, ಭಾರತದ ಪ್ರಧಾನಿಯೊಬ್ಬರು ಇತಿಹಾಸದಲ್ಲೇ ಮೊದಲಬಾರಿ ಲಂಚ ಆರೋಪ ಎದುರಿಸುತ್ತಿದ್ದಾರೆಂದು ಹೇಳಿದ್ದವು. ಆದರೆ ಪ್ರಕರಣವನ್ನು ಇತ್ಯರ್ಥ ಆಯೋಗಕ್ಕೆ(ಸೆಟ್ಲ್‌ಮೆಂಟ್ ಕಮಿಶನ್) ಕಳುಹಿಸಲಾಯಿತು. ಆಯೋಗದ ಅಧಿಕಾರಿಗಳನ್ನು ವರ್ಗಾಯಿಸಿ ಪ್ರಕರಣದ ಮೇಲೆ ಪ್ರಭಾವ ಬೀರಲಾಯಿತು. ಸಾಮಾನ್ಯವಾಗಿ ಆಯೋಗದ ತನಿಖೆ ಪೂರ್ಣಗೊಳ್ಳಲು ಒಂದೂವರೆ ವರ್ಷ ಅಗತ್ಯವಿದೆ. ಆದರೆ, ಒಂದೂವರೆ ತಿಂಗಳಲ್ಲಿ ಪ್ರಕರಣ ಆಯೋಗ ಇತ್ಯರ್ಥಗೊಳಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿಯವರ ಹೆಸರು ಹವಾಲ ಪ್ರಕರಣವೊಂದರಲ್ಲಿ ಕೇಳಿಸಿಕೊಂಡಾಗ ಅವರು, ನೈತಿಕಾಧಾರದಲ್ಲಿ ರಾಜೀನಾಮೆ ನೀಡಿದ್ದರು. ಪ್ರಧಾನಿ ಮೋದಿ ತಮ್ಮ ಮಾರ್ಗದರ್ಶಕರ ದಾರಿಯನ್ನೇ ತುಳಿಯಲಿದ್ದಾರೆಂಬ ನಿರೀಕ್ಷೆ ಇದೆ. ಪ್ರಕರಣದ ತನಿಖೆ ಸುಪ್ರೀಂಕೋರ್ಟಿನ ಮೇಲ್ನೋಟದಲ್ಲಿನಿಷ್ಪಕ್ಷ ಎಸ್‌ಐಟಿಯಿಂದ ನಡೆಯಬೇಕು. ಜನವರಿ 11ರವರೆಗೆ ಕಾಯದೆ ಸುಪ್ರೀಂಕೋರ್ಟು ಸ್ವಅರಿವಿನಿಂದ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ತನಗೆ ಇದೆ. ನೋಟು ಅಮಾನ್ಯ ಬಹುದೊಡ್ಡ ಹಗರಣವಾಗಿದೆ. ಪ್ರಧಾನಿ ತಮ್ಮ ಶ್ರೀಮಂತ ಗೆಳೆಯರ 8 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ. ಆದರೆ, ದೇಶವನ್ನು ಸರತಿಸಾಲಲ್ಲಿ ನಿಲ್ಲಿಸಿದರು. ಆಗಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ಹೆಸರಿದ್ದರೆ ಅವರನ್ನು ಬಂಧಿಸಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆಂದು ವರದಿತಿಳಿಸಿದೆ.







