ಕಲುಷಿತ ನೀರು ಪೂರೈಕೆ: ಕ್ರಮಕ್ಕೆ ಒತ್ತಾಯ

ಮೂಡಿಗೆರೆ, ಡಿ.22: ಪಟ್ಟಣದ ದೊಡ್ಡಿಬೀದಿಯಲ್ಲಿ ಪ್ರಸಾದ್ ಬ್ಲಾಕ್‌ನ ನಿವಾಸಿಗಳಿಗೆ ಪಪಂ ನಿಂದ ಸರಭರಾಜಾಗುತ್ತಿರುವ ಕುಡಿಯುವ ನೀರು ಸಂಪೂರ್ಣ ಕಲುಷಿತಗೊಂಡಿದೆ ಎಂದು ಸ್ಥಳೀಯ ನಿವಾಸಿಗಳಾದ ಸೋಮಣ್ಣ ಹಾಗೂ ಸುಗುಣ ದಂಪತಿಗಳು ಆರೋಪಿಸಿದ್ದಾರೆ.
ಅವರು ಬಾಟಲಿಯಲ್ಲಿ ತುಂಬಿದ ಕಲುಷಿತ ನೀರನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ಹೇಳಿಕೆ ನೀಡಿದ್ದು, ಕಳೆದ ಹದಿನೈದು ದಿನಗಳಿಂದ ತಮ್ಮ ಮನೆ ಸೇರಿದಂತೆ ಇಲ್ಲಿನ ಸುಮಾರು 100 ಮನೆಗಳಿಗೆ ಸಂಪೂರ್ಣ ಕಲುಷಿತ ನೀರು ನಲ್ಲಿ ಮೂಲಕ ಬರುತ್ತಿವೆ. ಈ ನೀರನ್ನು ಕುಡಿಯಲು ಬಳಸಲಾಗುತ್ತಿಲ್ಲ. ಸಂಪೂರ್ಣ ವಾಸನೆಯಿಂದ ಕೂಡಿದೆ. ಬಟ್ಟೆ ತೊಳೆಯಲು ಬಳಸಿದರೂ ಬಟ್ಟೆ ಸಂಪೂರ್ಣ ಮಣ್ಣಿನ ಬಣ್ಣಕ್ಕೆ ತಿರುಗುತ್ತದೆ ಎಂದು ದೂರಿದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಎಂಜಿನಿಯರ್ ಜಯಸಿಂಗ್ ನಾಯಕ್ ಅವರಿಗೆ ತಿಳಿಸಿದರೆ ಕ್ಯಾರೇ ಅನ್ನುತ್ತಿಲ್ಲ. ನಾವೇಬು ಮಾಡಕ್ಕಾಗಲ್ಲ. ಬೇಕಾದರೆ ಕುಡಿಯಿರಿ, ಇಲ್ಲದಿದ್ದರೆ ಬಿಡಿ ಎಂದು ಉಡಾಪೆಯಿಂದ ವರ್ತಿಸುತ್ತಾರೆ. ಬೀಜವಳ್ಳಿಯ ಸುಂಡೇಕೆರೆ ಹಳ್ಳದಿಂದ ದೊಡ್ಡಿಬೀದಿಯ ನೀರಿನ ಟ್ಯಾಂಕ್‌ಗೆ ತುಂಬಿದ ನಂತರ ಪ್ರಸಾದ್ ಬ್ಲಾಕ್‌ನ ಸುಮಾರು ನೂರಕ್ಕೂ ಅಧಿಕ ಮನೆಗಳಿಗೆ ಈ ನೀರು ಸರಭರಾಜಾಗುತ್ತದೆ. ಇದರಿಂದ ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.







