ದಿಡ್ಡಳ್ಳಿ ಗುಡಿಸಲು ತೆರವು ಪ್ರಕರಣ :16 ದಿನಗಳ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ
ತಾತ್ಕಾಲಿಕ ಮೂಲ ಸೌಕರ್ಯ ವ್ಯವಸ್ಥೆ

ಸೆ 144 ಜಾರಿ ವಿರುದ್ಧ ನಿರಾಶ್ರಿತ ಅದಿವಾಸಿಗಳ ಅಕ್ರೋಶ
ಸಿದ್ದಾಪುರ,ಡಿ.22: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿರುವ ಆದಿವಾಸಿಗಳು ಕಳೆದ 16 ದಿನಗಳಿಂದ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ತಡವಾಗಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಗುರುವಾರ ತಾತ್ಕಾಲಿಕ ಮೂಲ ಸೌಕರ್ಯವನ್ನು ಒದಗಿಸಿದೆ.
ಅಂಗನವಾಡಿ ಕಾರ್ಯಕರ್ತರಿಂದ ಮಕ್ಕಳ ಹಾಗೂ ಮಹಿಳೆಯರ ಇರುವಿಕೆ ದಾಖಲಾತಿ, ಆಶ್ರಮ ಶಾಲೆಯ ತಡೆಗೋಡೆ ಬಳಿ ವಿದ್ಯುತ್ ದೀಪ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲೆ ಹಿಂಭಾಗದಲ್ಲಿ ಶೌಚಾಲಯ, ಆರೋಗ್ಯ ತಪಾಸಣೆ, ಅಂದಾಜು ಸಾವಿರ ಮಂದಿಗೆ ದಿನಕ್ಕೆ ಎರಡು ಬಾರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಕೂಡಲೆ ಎಲ್ಲರಿಗೂ ಟಾರ್ಪಲ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆ 144 ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ಸ್ಥಳದ ಸುತ್ತಮುತ್ತಲಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದಿಡ್ಡಳ್ಳಿ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಸ್ಥಳೀಯರಲ್ಲದ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾದ್ಯಮದವರಿಗೂ ನಿರ್ಬಂಧ ಹೇರಲಾಗಿದ್ದು, ಮೇಲಧಿಕಾರಿಗಳ ಅನುಮತಿಯ ಮೇರೆಗೆ ಕೆಲವು ಮಾದ್ಯಮದವರಿಗೆ ಸಮಯ ನಿಗದಿಪಡಿಸಿ ಅವಕಾಶ ನೀಡುತ್ತಿದ್ದಾರೆ.
ಸೆ 144 ಜಾರಿ ಮಾಡಿದರೂ ಆದಿವಾಸಿಗಳ ಆಹೋರಾತ್ರಿ ಪ್ರತಿಭಟನೆ 16ನೆ ದಿನಕ್ಕೆ ಮುಂದುವರಿದಿದೆ.
ಹೋರಾಟವನ್ನು ಧಮನಿಸಲು ಮುಂದಾಗಿರುವ ಜಿಲ್ಲಾಡಳಿತ:
ಆದಿವಾಸಿ ನಾಯಕಿ ಮುತ್ತಮ್ಮ ಮಾತನಾಡಿ, ಶಾಂತಿಯುತವಾಗಿ ಹೋರಾಟ ಮಾಡುತ್ತಿರುವ ಸ್ಥಳಕ್ಕೆ ಜಿಲ್ಲಾಡಳಿತ ಸೆ 144 ಜಾರಿಗೊಳಿಸುವ ಮೂಲಕ ಭೂಮಿ ಹಾಗೂ ವಸತಿಗಾಗಿ ಆದಿವಾಸಿಗಳು ನಡೆಸುತ್ತಿರುವ ಹೋರಾಟವನ್ನು ಧಮನಿಸಲು ಮುಂದಾಗಿದ್ದಾರೆ. ಹೊರಗಿನಿಂದ ಬಂದವರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದಿದ್ದಾರೆ. ಅವರಿಂದಾಗಿ ನಮ್ಮ ಹೋರಾಟ ಎಲ್ಲರ ಗಮನ ಸೆಳೆದಿದೆ. ಇಲ್ಲಿನ ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿ ಹೋರಾಟದ ಧಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಯಾವುದೇ ಕಾರಣಕ್ಕೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ನಾಳೆ (ಡಿ.23) ನಡೆಯಲಿರುವ ಮಡಿಕೇರಿ ಚಲೋ ಸಮಾವೇಶದಲ್ಲಿ ನಾವು ಭಾಗವಹಿಸಲಿದೆ. ದಿಡ್ಡಳ್ಳಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿರುವುದರಿಂದ ಸರಕಾರ ಮತ್ತು ಜಿಲ್ಲಾಡಳಿತ ಬೆತ್ತಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.







