ಪಿಲಿಕುಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಡಿಸಿ ಜಗದೀಶ್
ಎಸ್‌ಬಿಐಯಿಂದ ಜಲ ಶುದ್ದೀಕರಣ ಘಟಕ ಕೊಡುಗೆ

ಮಂಗಳೂರು, ಡಿ.22: ಪಿಲಿಕುಳ ನಿರ್ಸಗಧಾಮವು ಸರಕಾರದ ಯೋಜನೆಗಳಿಗಿಂತ ಹೆಚ್ಚಾಗಿ ಇಲ್ಲಿನ ಜನರು ಹಾಗೂ ಸಂಘಸಂಸ್ಥೆಗಳು ನೀಡಿರುವ ಕೊಡುಗೆ ಹಾಗೂ ಸಹಕಾರದಿಂದ ಅಭಿವೃದ್ಧಿಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಹೇಳಿದ್ದಾರೆ.
ನಗರದ ಪಿಲಿಕುಳ ನಿಸರ್ಗಧಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ಸಮಾಜಕ್ಕೆ ಬ್ಯಾಂಕ್‌ಗಳ ಕೊಡುಗೆ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಿಲಿಕುಳವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ದ.ಕ. ಜಿಲ್ಲೆಯವರಿಗೆ ಇದು ಮನರಂಜನೆಯ ತಾಣವಾಗಿದ್ದರೆ. ಬೇರೆ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಇದು ಉತ್ತಮ ಪ್ರವಾಸಿ ತಾಣವಾಗಿದೆ ಎಂದರು. ಪಿಲಿಕುಳ ನಡೆದು ಬಂದ ಹಾದಿಯಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಸಂಸ್ಥೆಗಳ ಕೊಡುಗೆಗಳು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಪಿಲಿಕುಳದಲ್ಲಿ ಜಲ ಶುದ್ಧಿಕರಣ ಘಟಕದ ಸ್ಥಾಪನೆಗೆ 25 ಲಕ್ಷ ರೂ. ನೀಡುತ್ತಿದೆ ಎಂದ ಜಿಲ್ಲಾಧಿಕಾರಿ, ಪಿಲಿಕುಳದಲ್ಲಿ ಮೃಗಾಲಾಯ, ಜಲಕ್ರೀಡೆ, ರೆಸ್ಟೋರೆಂಟ್ ಸೇರಿದಂತೆ ಹಲವು ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಸಾರ್ವಜನಿಕರಿಗೆ ಹಲವಾರು ಅವಕಾಶಗಳಿದೆ. ಇದನ್ನು ಸದಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೀಫ್ ಜನರಲ್ ಮ್ಯಾನೇಜರ್ ರಜನೀ ಮಿಶ್ರ ಮಾತನಾಡಿ, ಎಸ್‌ಬಿಐ ರಾಜ್ಯದ ಪ್ರತಿಜಿಲ್ಲೆಗಳಲ್ಲಿ ಹಲವು ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಸೋಲಾರ್ ಅಳವಡಿಕೆ ಸೇರಿದಂತೆ ಆಸ್ಪತ್ರೆಯ ವಲಯಗಳಲ್ಲಿ ಹಲವರಿಗೆ ನೆರವಾಗುವಂತೆ ದೇಣಿಗೆಗಳನ್ನು ನೀಡಿದ್ದೇವೆ ಎಂದರು.
ವೇದಿಕೆಯಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಗಾಯತ್ರಿ ಎನ್. ನಾಯಕ್, ಜನರಲ್ ಮ್ಯಾನೇಜರ್ (ಬೆಂಗಳೂರು ವಲಯ) ವೈ. ವಿಜಯ ಕುಮಾರ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಜಿ.ಪಿ. ರಾಯ್ ಉಪಸ್ಥಿತರಿದ್ದರು.







