ಮೈಗೆ ಕೈ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಎಲ್ಲರೂ ಸೇರಿ ಮಹಿಳೆಗೇ ಬಾರಿಸಿದರು !
ಇದು ಎಂಥಾ ಲೋಕವಯ್ಯ ?

ಲಕ್ನೋ,ಡಿ.22: ಉತ್ತರ ಪ್ರದೇಶದ ಮೈನಪುರಿಯಲ್ಲಿ ಜನರ ಗುಂಪು ಮಹಿಳೆಯೋರ್ವಳನ್ನು ಒಂದಿನಿತೂ ಕರುಣೆ ತೋರದೆ ಬರ್ಬರವಾಗಿ ಥಳಿಸಿದೆ. ತನ್ನೊಂದಿಗೆ ಇಬ್ಬರು ವ್ಯಕ್ತಿಗಳ ಅಸಭ್ಯ ವರ್ತನೆಯನ್ನು ಈ ಮಹಿಳೆ ಪ್ರತಿಭಟಿಸಿದ್ದು ಗುಂಪಿನ ದುಷ್ಕೃತ್ಯಕ್ಕೆ ಕಾರಣವಾಗಿತ್ತು. ಫೇಸ್‌ಬುಕ್‌ನಲ್ಲಿ 52,000ಕ್ಕೂ ಹೆಚ್ಚಿನ ಜನರು ಶೇರ್ ಮಾಡಿರುವ ವೀಡಿಯೊದಲ್ಲಿ ಮಹಿಳೆಯನ್ನು ಮುಖಮೂತಿ ಎನ್ನದೆ ಥಳಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಮಹಿಳೆಯ ಬಳಿ ಅಳುತ್ತ ನಿಂತಿರುವ ಮಗು ಆಕೆಯ ಪುತ್ರಿಯಾಗಿದ್ದು, ತನ್ನ ತಾಯಿಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿದ್ದಾಳೆ.
ಹಲ್ಲೆಕೋರರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ.
ಗುಂಪು ಮಹಿಳೆಯ ಜೊತೆಗೆ ಆಕೆಯ ಪತಿಯನ್ನೂ ಥಳಿಸಿದೆ. ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸದಿದ್ದರೆ ತಾನು ಗುಂಡು ಹೊಡೆದುಕೊಂಡು ಸಾಯುವುದಾಗಿ ಸ್ಥಳಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಗೆ ಸಂತ್ರಸ್ತ ಮಹಿಳೆ ಎಚ್ಚರಿಕೆ ನೀಡಿದ್ದಾಳೆ.





