ಕೃಷಿಕೂಲಿಕಾರರ ಸಂಘದ ರಾಜ್ಯ ಸಮ್ಮೇಳನ ಸಮಾರೋಪ

ಕುಂದಾಪುರ, ಡಿ.22: ಕೆಳವರ್ಗ ಸಮುದಾಯದವರು ಕೂಲಿ ಕಾರ್ಮಿಕರಾಗಿದ್ದು, ಅವರ ತಿಳುವಳಿಕೆಯನ್ನು ಗಮನದಲ್ಲಿರಿಸಿಕೊಂಡು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಬಡಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಆಳುವ ವರ್ಗ ನೀಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಎದುರಿಸಲು ನಾವೆಲ್ಲ ಒಂದಾಗಬೇಕಾಗಿದೆ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್ ರಾಘವನ್ ಹೇಳಿದ್ದಾರೆ.
ಕುಂದಾಪುರ ಕಾರ್ಮಿಕ ಭವನದಲ್ಲಿ ಬುಧವಾರ ನಡೆದ ಕೃಷಿಕೂಲಿಕಾರರ ಸಂಘದ 6ನೆ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಬಡವರ ಶೋಷಣೆ ಮಾಡುತ್ತಿರುವ ಕಾರ್ಪೋರೇಟರ್, ಶ್ರೀಮಂತರು, ಭೂಮಾಲಕರ ವಿರುದ್ದ ನಾವು ಸೆಟೆದು ನಿಲ್ಲಬೇಕಾಗಿದೆ. ಇವರೆಲ್ಲರನ್ನೂ ಎದುರಿಸಲು ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಸ್ಥಳೀಯವಾಗಿ ಕಾರ್ಯಕರ್ತರನ್ನು ಸೈದ್ದಾಂತಿಕವಾಗಿ ಸಂಘಟಿಸಿ ಪ್ರಬಲ ಚಳವಳಿ ರೂಪಿಸ ಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ 6ನೆ ರಾಜ್ಯ ಸಮ್ಮೇಳನದಲ್ಲಿ 52 ಜನರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. 14 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಪ್ಪ ಹೊಸ್ಕೇರಾ ಅವರನ್ನು ಪುನರಾಯ್ಕೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಶಂಕರ್ ವಹಿಸಿದ್ದರು. ಕೃಷಿಕೂಲಿಕಾರರ ಸಂಘದ ರಾಷ್ಟ್ರಾಧ್ಯಕ್ಷ ತಿರುನಾವಕ್ಕರಸು, ರಾಜ್ಯಾಧ್ಯಕ್ಷ ನಿತ್ಯಾ ನಂದ ಸ್ವಾಮಿ, ಮುಖಂಡ ರಾದ ಬಾಲಕೃಷ್ಣ ಶೆಟ್ಟಿ, ದಾಸು ಭಂಡಾರಿ, ಸ್ವಾಗತ ಸಮಿತಿಯ ಕೋಶಾಧಿಕಾರಿ ರಾಜೀವ ಪಡುಕೋಣೆ ಉಪಸ್ಥಿತರಿದ್ದರು. ಸಂಘದ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ವಂದಿಸಿದರು.







