ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯಪುರ, ಡಿ. 22: ಜಿಲ್ಲೆಯ 184 ಕೆರೆಗಳನ್ನು 2017ರ ಡಿಸೆಂಬರ್ ಅಂತ್ಯದ ವೇಳೆ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಅವಕಾಶ ಇರುವ ಕಡೆಗಳಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗುರುವಾರ ವಿಜಯಪುರ ಜಿಲ್ಲೆಯ ಐತಿಹಾಸಿಕ ಮಮದಾಪುರ, ಭೂತನಾಳ, ಬೇಗಂ ತಲಾಬ್, ಬಬಲೇಶ್ವರ, ಸಾರವಾಡ, ತಿಡಗುಂದಿ ಕೆರೆ ತುಂಬಿಸುವ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರಿಂದ ಅಂತರ್ಜಲದ ಮಟ್ಟವೂ ಹೆಚ್ಚಾಗುತ್ತದೆ ಎಂದರು.
ಕೆರೆ ತುಂಬಿಸುವ ಯೋಜನೆಯೊಂದಿಗೆ ಕೃಷಿ ಭಾಗ್ಯ ಮತ್ತು ಕೆರೆ ಸಂಜೀವಿನಿ ಯೋಜನೆಯನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ. ಆ ಮೂಲಕ ರೈತರಿಗೆ ಶಕ್ತಿ ತುಂಬಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುವಂತೆ ಮಾಡುವುದು ಸರಕಾರದ ಉದ್ದೇಶ ಎಂದು ಹೇಳಿದರು.
ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ನೀರು ಪೋಲಾಗುವುದನ್ನು ತಪ್ಪಿಸುವುದು ಸರಕಾರ ಮುಖ್ಯ ಉದ್ದೇಶ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಈ ಭಾಗದ ಎಂಟು ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ. 1ಲಕ್ಷ ಕೋಟಿ ರೂ. ಬೇಕಾಗುತ್ತದೆ. ಮೊದಲು 50 ಸಾವಿರ ಕೋಟಿ ರೂ.ಅಂದಾಜು ಮಾಡಲಾಗಿತ್ತು ಎಂದು ವಿವರಿಸಿದರು.
ಸಾಲ ಮನ್ನಾಕ್ಕೆ ಸಿದ್ಧ: ಸಹಕಾರ ಬ್ಯಾಂಕುಗಳ ಮೂಲಕ ರಾಜ್ಯ ಸರಕಾರ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ನೀಡಿದೆ. ಕೇಂದ್ರ ಸರಕಾರ ರಾಷ್ಟ್ರಕೃತ ಬ್ಯಾಂಕುಗಳ ಮೂಲಕ 35 ಸಾವಿರ ಕೋಟಿ ರೂ.ಸಾಲ ನೀಡಿದೆ. ಕೇಂದ್ರ ಸರಕಾರ ಅರ್ಧ ಸಾಲ ಮನ್ನಾ ಮಾಡಿದರೆ ತಾವೂ ಶೇ.50ರಷ್ಟು ರೈತರ ಸಾಲ ಮನ್ನಾ ಮಾಡಲು ಸಿದ್ಧ ಎಂದು ಘೋಷಿಸಿದರು.
ತಾನೂ ರೈತನ ಮಗನೇ. ರೈತರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತಕ್ಕೆ 55 ಸಾವಿರ ಕೋಟಿ ರೂ. ಬೇಕಾಗುತ್ತದೆ. ನಮ್ಮ ಅವಧಿಯಲ್ಲಿ ಅದರ ಕಾಮಗಾರಿ ಮುಗಿಯದು. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಪೂರ್ಣಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ನೀರಾವರಿಗೆ ನಮ್ಮ ಸರಕಾರ ಆದ್ಯತೆ ನೀಡುತ್ತದೆ. ಹೆಚ್ಚಿನ ಅನುಕೂಲ ಆಗಲಿ ಎಂಬ ಕಾರಣಕ್ಕೆ ಇದೇ ಭಾಗದವರಾದ ಎಂ.ಬಿ.ಪಾಟೀಲ್ ಅವರನ್ನು ಜಲಸಂಪನ್ಮೂಲ ಸಚಿವರನ್ನಾಗಿ ಮಾಡಲಾಗಿದೆ. ಉತ್ತರ ಕರ್ನಾಟಕ ಮಾತ್ರವಲ್ಲ, ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡುತ್ತೇವೆ.
ತಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ. ಉತ್ತರ, ದಕ್ಷಿಣ, ಕರಾವಳಿ, ಮಲೆನಾಡು ಎಲ್ಲ ನನಗೆ ಒಂದೇ. ಪ್ರತ್ಯೇಕ ರಾಜ್ಯದ ಹೆಸರಲ್ಲಿ ಒಡಕಿನ ಧ್ವನಿ ಮೂಡಿಸುವ ಕೆಲಸವನ್ನು ಯಾರೂ ಮಾಡಬಾರದು. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ಏಕೀಕರಣದ ಉದ್ದೇಶಕ್ಕೆ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಸಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮೇಲ್ಮನೆ ಸದಸ್ಯ ಬಸವರಾಜ ಪಾಟೀಲ್ ಯತ್ನಾಳ್, ಶಾಸಕ ಮಕ್ಬೂಲ್ ಭಾಗ್ವಾನ್, ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.







