ಕನ್ನಡದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ

ಮಾನ್ಯರೆ,
ವೈದ್ಯ ಮತ್ತು ದಂತ ವೈದ್ಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೀಟ್)ಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಕೇಂದ್ರ ಸರಕಾರವು ಅನುವು ಮಾಡಿಕೊಡುವುದಾಗಿ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರು ಘೋಷಿಸಿರುವುದು ಸರಿಯಷ್ಟೆ. ಆದರೆ 2000 ವರ್ಷಕ್ಕೂ ಹೆಚ್ಚು ಸುದೀರ್ಘ ಇತಿಹಾಸವಿರುವ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಬಹಳ ವಿಷಾದನೀಯ ಸಂಗತಿ.
ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.70 ರಷ್ಟು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರ ಪರವಾಗಿ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾದ ಪ್ರಕಾಶ್ ಜಾವ್ಡೇಕರ್‌ರನ್ನು ಒತ್ತಾಯಿಸುತ್ತದೆ.
ಈ ಬಗ್ಗೆ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರು ಕೂಡಾ ಒತ್ತಡ ಹೇರಬೇಕಾಗಿದೆ.
ಡಾ. ಮನು ಬಳಿಗಾರ್, ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು





