ನಾಳೆಯಿಂದ ಪಣಂಬೂರು ಬೀಚ್‌ನಲ್ಲಿ ದ್ರಾಕ್ಷಾರಸ ಉತ್ಸವ
ಮಂಗಳೂರು, ಡಿ.22: ಕರಾವಳಿ ಉತ್ಸವ ಹಾಗೂ ಕ್ರಿಸ್‌ಮಸ್ ಪ್ರಯುಕ್ತ ಡಿ.23ರಿಂದ 25ರವರೆಗೆ ಕರಾವಳಿ ಬೀಚ್ ದ್ರಾಕ್ಷಾಸರ ಉತ್ಸವ ಪಣಂಬೂರು ಬೀಚ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಕದ್ರಿ ಪಾರ್ಕ್‌ನಲ್ಲಿ ನಡೆದ ಮಂಗಳೂರು ದ್ರಾಕ್ಷಾರಸ ಉತ್ಸವಕ್ಕೆ ಯಶಸ್ವಿಯಾಗಿದೆ. ಉತ್ಸವದಲ್ಲಿ 20 ಲಕ್ಷ ರೂ. ವಹಿವಾಟು ನಡೆದಿದ್ದು, ರಾಜ್ಯದ ಇತರೆಡೆಯಿಂದ ಕರಾವಳಿಯಲ್ಲಿ ಹೆಚ್ಚು ಯಶಸ್ವಿಯಾಗಿ ನಡೆದಿದೆ. ಇದೀಗ ಕರಾವಳಿಯಲ್ಲಿ ಮತ್ತೊಮ್ಮೆ ದ್ರಾಕ್ಷಾರಸ ಉತ್ಸವವನ್ನು ಆಯೋಜಿಸಿದ್ದು 10ರಿಂದ 12ಕ್ಕೂ ಅಧಿಕ ವೈನರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಡಿ.23ರಂದು ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉತ್ಸವಕ್ಕೆ ಚಾಲನೆ ನೀಡುವರು. ದ್ರಾಕ್ಷಾರಸ ಮಳಿಗೆಗಳನ್ನು ತೋಟಗಾರಿಕಾ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಶಾಸಕ ಮೊಹಿದ್ದೀನ್ ಬಾವಾ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಡಿ.23ರಂದು ಶಿವಮೊಗ್ಗದ ಸಮನ್ವಯ ತಂಡದಿಂದ ಸಂಗೀತ ಸಂಜೆ, ಡಿ.24ರಂದು ಸಮನ್ವಯ ತಂಡದಿಂದ ರಾಕ್ ಶೋ ಹಾಗೂ ಡಿ.25ರಂದು ಮಂಗಳೂರು ಥರ್ಮಲ್ ಜಾಯಿಂಟ್ ಬ್ಯಾಂಡ್ ನಡೆಯಲಿದೆ.
ತೋಟಗಾರಿಕಾ ಉಪನಿರ್ದೇಶಕ ಯೋಗೇಶ್ ಎಚ್.ಆರ್. ಮಾತನಾಡಿ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ವೈನ್ ಉತ್ಸವದಲ್ಲಿ ಎಲ್ಲ ವೈನ್ ಬ್ರಾಂಡ್ ಮಾರಾಟಗಳ ಮೇಲೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು, ಜನರಲ್ ಮ್ಯಾನೇಜರ್ ಸರ್ವೇಶ್ ಕುಮಾರ್ ಉಪಸ್ಥಿತರಿದ್ದರು.







