ಸಹಾರಾ ನೀಡಿದ್ದ 10 ಪ್ಯಾಕೆಟ್‌ಗಳಲ್ಲಿ ಏನಿತ್ತು...? :ಪ್ರಧಾನಿ ಮೋದಿಗೆ ರಾಹುಲ್ ಪ್ರಶ್ನೆ

ಹೊಸದಿಲ್ಲಿ, ಡಿ.22: ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ತನ್ನ ಆರೋಪ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದೀಜಿ, ಸಹಾರಾದವರು ನೀಡಿದ್ದ 10 ಪ್ಯಾಕೆಟ್‌ಗಳಲ್ಲಿ ಏನಿತ್ತು ಎಂಬುದನ್ನು ತಿಳಿಸಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ನ ಜೊತೆಗೆ ಆದಾಯ ತೆರಿಗೆ ಇಲಾಖೆಯ ದಾಖಲೆಯಲ್ಲಿ ಇದೆ ಎನ್ನಲಾಗಿರುವ 2013ರ ಅಕ್ಟೋಬರ್‌ನಿಂದ 2014ರ ಫೆಬ್ರವರಿವರೆಗಿನ ಅವಧಿಯಲ್ಲಿ ಮಾಡಲಾಗಿರುವ ಒಂಬತ್ತು ಉಲ್ಲೇಖದ ದಾಖಲೆಯನ್ನು ಲಗತ್ತೀಕರಿಸಲಾಗಿದೆ. ಇದರಲ್ಲಿ ‘ಮೋದೀಜಿಯವರಿಗೆ ನಗದು ಪಾವತಿ’ ಎಂದು ಉಲ್ಲೇಖಿಸಲಾಗಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಹಾರಾ ಸಂಸ್ಥೆ 10 ಪ್ಯಾಕೆಟ್‌ಗಳನ್ನು ಅವರಿಗೆ ನೀಡಿತ್ತು ಎಂದು ಹೇಳಲಾಗಿದೆ.
ತನ್ನ ವಿರುದ್ಧ ರಾಹುಲ್ ಮಾಡಿರುವ ಭ್ರಷ್ಟಾಚಾರದ ಆರೋಪ ಹಾಸ್ಯಾಸ್ಪದ ಎಂದು ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಕೊನೆಗೂ ಮಾತನಾಡಲು ಕಲಿಯುತ್ತಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್‌ನವರಿಗೆ ಈಗಷ್ಟೇ ಮಾತನಾಡಲು ಕಲಿಯುತ್ತಿರುವ ಯುವ ನಾಯಕನೋರ್ವ ಲಭ್ಯವಾಗಿದ್ದಾರೆ. ಅವರು ಮಾತನಾಡಲು ಕಲಿತಾಗ ನನ್ನ ಸಂತೋಷಕ್ಕೆ ಪಾರವೇ ಇರದು. 2009ರಲ್ಲಿ , ಈ ಪ್ಯಾಕೆಟ್‌ನಲ್ಲಿ ಏನಿತ್ತು ಮತ್ತು ಏನಿಲ್ಲ ಎಂಬುದನ್ನು ಹೇಳಲು ನಿಮಗೆ ಸಾಧ್ಯವಾಗಲಿಲ್ಲ. ನಾವು ಈಗ ಅದನ್ನು ಶೋಧಿಸುತ್ತೇವೆ ಎಂದು ಮೋದಿ ಹೇಳಿದರು.







