ಡಿ.24 : ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ‘ಯಕ್ಷ ಭಾಮಿನಿ’
ಮಂಗಳೂರು, ಡಿ.22 : ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕೇಂದ್ರ ಮಹಿಳಾ ಘಟಕ ಅಶಕ್ತ ಬಡವೃತ್ತಿಪರ ಕಲಾವಿದರಿಗೆ ಗೃಹ ನಿರ್ಮಾಣ ಮಾಡುವ ಆಶ್ರಯ ಯೋಜನೆಗೆ ಸಂಬಂಧಿತ ‘ಯಕ್ಷ ಭಾಮಿನಿ’ ಕಾರ್ಯಕ್ರಮ ಡಿ.24ರಂದು ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಮಹಿಳಾ ಘಟಕದ ಅಧ್ಯಕ್ಷರಾದ ಪೂರ್ಣಿಮ ಯತೀಶ್ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಮಧ್ಯಾಹ್ನ 1ಕ್ಕೆ ಉದ್ಘಾಟನೆಗೊಂಡು ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆ ಬಳಿಕ ಜಾಂಬವತಿ ಕಲ್ಯಾಣ ಎಂಬ ತಾಳಮದ್ದಳೆ ಜಿಲ್ಲೆಯ ಆಯ್ದ ಮಹಿಳಾ ಕಲಾವಿದೆಯರ ಕೂಡುವಿಕೆಯಲ್ಲಿ ಜರಗಲಿದೆ ಎಂದು ತಿಳಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ,ಮೂರು ವರ್ಷಗಳಲ್ಲಿ 100 ಮಂದಿ ಅಶಕ್ತ ಯಕ್ಷಕಲಾವಿದರಿಗೆ ಮನೆ ನಿರ್ಮಿಸಿ ಕೊಡುವ 8ರಿಂದ 10 ಕೋಟಿ ಮೊತ್ತದ ಯೋಜನೆ ಆಯೋಜಿಸಿದ್ದು, 3 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಸೂಕ್ತ ಜಾಗ ಹುಡುಕಾಟ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೇಂದ್ರ ಮಹಿಳಾ ಘಟಕದ ಸಂಚಾಲಕರಾದ ನಿವೇದಿತಾ ಎನ್. ಶೆಟ್ಟಿ, ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ಉಪಸ್ಥಿತರಿದ್ದರು







