ಡಿ.25: ಕೃತಿ ಬಿಡುಗಡೆ
ಮಂಗಳೂರು, ಡಿ.22: ಚಿತ್ರಾನ್ನ..32 ನೈಜ ದಂತ ಕತೆಗಳ ಪುಸ್ತಕ ಬಿಡುಗಡೆ ನಗರದ ನಂತೂರಿನ ಶ್ರೀಭಾರತಿ ಕಾಲೇಜಿನ ಶಂಕರ ಶ್ರೀಸಭಾಭವನದಲ್ಲಿ ಡಿ.25ರಂದು ಪೂ.11ಕ್ಕೆ ನಡೆಯಲಿದೆ ಎಂದು ಕೃತಿಯ ಸಂಪಾದಕ ಡಾ. ಮುರಲಿ ಮೋಹನ್ ಚೂಂತಾರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಮತ್ತು ಭಾರತಿ ಕಾಲೇಜಿನ ಕನ್ನಡ ಸಂಘ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೃತಿಯನ್ನು ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬಿಡುಗಡೆಗೊಳಿಸುವರು. ಹಾಸ್ಯ ಸಾಹಿತಿ ವೈ.ವಿ. ಗಂಡೂರಾವ್ ಮುಖ್ಯ ಅತಿಥಿಗಳಾಗಿರುವರು. ಪುಸ್ತಕದ ಕುರಿತು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಮಾತನಾಡಲಿದ್ದಾರೆ. ರಾಜ್ಯ ದಂತ ವೈದ್ಯ ಪರಿಷತ್ತಿನ ಅಧ್ಯಕ್ಷ ರಾಜ್‌ಕುಮಾರ್ ಅಳ್ಳೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಚಿತ್ರಾನ್ನ ಪುಸ್ತಕ 32 ನೈಜ ದಂತ ಕತೆಗಳನ್ನು ಆಧರಿಸಿದ ವಿಭಿನ್ನ ಹಾಸ್ಯ ಕೃತಿ ಇದು. ರಾಜ್ಯದ ಹಿರಿಯ- ಕಿರಿಯ ನುರಿತ ಮೂವತ್ತೆರಡು ಮಂದಿ ದಂತ ವೈದ್ಯರು ಈ ಪುಸ್ತಕದ ಮೂಲಕ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಅಧ್ಯಕ್ಷ ಚೂಂತಾರು ಲಕ್ಷ್ಮೀನಾರಾಯಣ ಭಟ್, ಭಾರತಿ ಕಾಲೇಜು ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.







