ಉಡುಪಿಯಲ್ಲಿ ವನವಾಸಿ ಕಲ್ಯಾಣ ರಾಜ್ಯ ಸಮ್ಮೇಳನ
ಉಡುಪಿ, ಡಿ.22: ವನವಾಸಿ ಕಲ್ಯಾಣ ಕರ್ನಾಟಕ ಇದರ ಪ್ರಾಂತ (ರಾಜ್ಯ) ಸಮ್ಮೇಳನ ಡಿ.26ರಿಂದ 28ರವರೆಗೆ ಮೂರು ದಿನಗಳ ಕಾಲ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ವನವಾಸಿ ಕಲ್ಯಾಣ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದಶರ್ನಿ ಶ್ರೀಪಾದ ಅವರು ಶ್ರೀಕೃಷ್ಣ ಮಠದ ಬಡಗುಮಳಿಗೆಯಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸಮ್ಮೇಳನದಲ್ಲಿ ರಾಜ್ಯದ 15ಜಿಲ್ಲೆಗಳ 500ಕ್ಕೂ ಅಧಿಕ ವನವಾಸಿ-ಗಿರಿಜನ ಪ್ರತಿನಿಧಿಗಳು ಸೇರುವ ನಿರೀಕ್ಷೆ ಇದೆ. ವನವಾಸಿಗಳ (ಗಿರಿಜನರ) ಸರ್ವಾಂಗೀಣ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆ ವನವಾಸಿ ಕಲ್ಯಾಣ ಕರ್ನಾಟಕ ಎಂದವರು ನುಡಿದರು.
ದೇಶದಲ್ಲಿ 10.5ಕೋಟಿಯಷ್ಟು ವನವಾಸಿ-ಗಿರಿಜನರ ಜನಸಂಖ್ಯೆ ಇದ್ದು, ರಾಜ್ಯದಲ್ಲಿ ಸುಮಾರು 50 ಜಾತಿಗಳಲ್ಲಿ 50 ಲಕ್ಷ ಜನಸಂಖ್ಯೆ ಇದೆ. ಕರಾವಳಿ, ಮಲೆನಾಡು ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ, ಮೈಸೂರು, ಚಾಮರಾಜ ನಗರ, ಕೊಡಗು ಜಿಲ್ಲೆಗಳಲ್ಲಿ ಕೊರಗ, ಮಲೆಕುಡಿಯ, ಸೊಲಿಗ, ಜೇನುಕುರುಬ, ಯರವ, ಸಿದ್ಧಿ, ಗೊಂಡ, ಗೌಳಿ, ಮರಾಠಿ, ಕುಣಬಿ ಮುಂತಾದ ಜಾತಿಗಳಲ್ಲಿ ಇವರು ಗುರುತಿಸಲ್ಪಡುತಿದ್ದಾರೆ ಎಂದರು.
ಗುಡ್ಡಗಾಡು-ಕಾಡುಗಳಲ್ಲೇ ವಾಸಿಸುವ ಇವರು ಕಾಡುತ್ಪನ್ನಗಳ ಸಂಗ್ರಹಿಸಿ ಮಾರುತ್ತಾರೆ. ಇವರ ತಮ್ಮದೇ ಆದ ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಹೊಂದಿದ್ದಾರೆ. ವನವಾಸಿ ಕಲ್ಯಾಣ ಇವರ ಏಳಿಗೆಗಾಗಿ, ಇವರನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಕೆಲಸ ಮಾಡುತ್ತಿದೆ. ವನವಾಸಿ ಮಕ್ಕಳಿಗಾಗಿ ಒಟ್ಟು 7 ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಎರಡು ಬಾಲಕಿಯರಿಗೆ (ದಾಂಡೇಲಿ ಮತ್ತು ಮೈಸೂರು) ಮೀಸಲಾಗಿದೆ ಎಂದರು.
ಉಡುಪಿಯಲ್ಲಿ ನಡೆಯುವ ಪ್ರಾಂತ ಸಮ್ಮೇಳನದಲ್ಲಿ ಕರಾವಳಿಯ ಕೊರಗ ಮತ್ತು ಮಲೆಕುಡಿಯ ಜನಾಂಗದ ಅಭ್ಯುದಯಕ್ಕೆ ಹೆಚ್ಚಿನ ಒತ್ತು ನೀಡಲಾಗು ವುದು. 26ರಂದು ಅಪರಾಹ್ನ 3:00ಕ್ಕೆ ಸಮ್ಮೇಳನವನ್ನು ರಾಜಾಂಗಣದಲ್ಲಿ ಪೇಜಾವರ ಶ್ರೀಗಳು ಉದ್ಘಾಟಿಸಲಿದ್ದು, ಪ್ರಾಂತ ಅಧ್ಯಕ್ಷ ಎಂ.ಎಸ್.ವೆಂಕಟೇಶ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ. ಗೌಹಾಟಿಯ ಅಖಿಲ ಭಾರತೀಯ ಶ್ರದ್ಧಾ ಹಗರಣ ಪ್ರಮುಖ ರಮೇಶ್ ಬಾಬು ಮುಖ್ಯ ಅತಿಥಿಯಾಗಿರುವರು.
ಅದೇ ದಿನ ಸಂಜೆ 6:00ಕ್ಕೆ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಜನಜಾತಿಯ ವಿವಿಧ ತಂಡಗಳಿಂದ ಪಾರಂಪರಿಕ ವೇಷಭೂಷಣದಲ್ಲಿ ನೃತ್ಯ ಪ್ರದರ್ಶನವಿದೆ ಎಂದರು.







