ಸ್ವಯಂ ಘೋಷಿತ ಆಸ್ತಿ ತೆರಿಗೆ: ಶೇ.15 ಹೆಚ್ಚಳ : ಮನಪಾ ವಿಶೇಷ ಸಭೆಯಲ್ಲಿ ನಿರ್ಣಯ

ಮಂಗಳೂರು, ಡಿ.22: ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್)ನ್ನು ಶೇ.15 ಹೆಚ್ಚಳ ಮಾಡಿ ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.
ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಳ ಮಾಡಬಾರದು. ಈ ಹಿಂದೆ ಪಾಲಿಕೆ ಚುನಾವಣೆ ವೇಳೆ ಎಸ್‌ಎಎಸ್ ಹೆಚ್ಚಳ ಮಾಡುವುದಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಬಳಿಕ ಇದೀಗ 2ನೆ ಬಾರಿಗೆ ಎಸ್‌ಎಎಸ್ ಹೆಚ್ಚಳ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ಸದಸ್ಯರಾದ ರೂಪಾ ಡಿ.ಬಂಗೇರ, ಬಿಜೆಪಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ತಿಲಕ್‌ರಾಜ್ ಮೇಯರ್‌ನ್ನು ತರಾಟೆಗೆ ತೆಗೆದುಕೊಂಡರು. ಸಿಪಿಎಂ ಸದಸ್ಯ ದಯಾನಂದ ಶೆಟ್ಟಿ ತೆರಿಗೆ ಹೆಚ್ಚಳಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ರಾಜ್ಯದ ಎಲ್ಲ ಪಾಲಿಕೆಗಳಲ್ಲೂ ಪ್ರತಿ ಮೂರು ವರ್ಷಗಳಿಗೊಮ್ಮೆ ಎಸ್‌ಎಎಸ್ ಹೆಚ್ಚಳ ಆಗುತ್ತಿದೆ. ಈ ಬಗ್ಗೆ ಕಾನೂನು ಕೂಡ ಇದೆ. ಕಾನೂನನ್ನು ಉಲ್ಲಂಘಿಸುವಂತಿಲ್ಲ. 2008ರ ಎಪ್ರಿಲ್ 1, 2011ರ ಎಪ್ರಿಲ್ 1, 2014ರ ಎಪ್ರಿಲ್ 1 ಹಾಗೂ 2016ರ ಎಪ್ರಿಲ್ 1ರಂದು ಯಥಾಪ್ರಕಾರವಾಗಿ ಕಾನೂನಿನಂತೆ ತೆರಿಗೆ ಹೆಚ್ಚಳ ಆಗಿದೆ. ಒಂದು ವೇಳೆ ಎಸ್‌ಎಎಸ್ ಹೆಚ್ಚಳ ಮಾಡದೆ ನಿರ್ಣಯ ಕೈಗೊಂಡರೆ ಸರಕಾರವೇ ನೇರವಾಗಿ ಇದನ್ನು ಅನುಷ್ಠಾನಗೊಳಿಸುತ್ತದೆ ಎಂದು ವಿವರಿಸಿದಲ್ಲದೆ, ತೆರಿಗೆ ಹೆಚ್ಚಳವಾದ ಕುರಿತಂತೆ ಪಾಲಿಕೆ ಯಾವುದೇ ಪ್ರಕಟನೆ ನೀಡದಿದ್ದರೂ ಈಗಾಗಲೇ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಪ್ರೇಮಾನಂದ ಶೆಟ್ಟಿ ಎಷ್ಟು ಮಂದಿ ಹೆಚ್ಚಿನ ತೆರಿಗೆ ಕಟ್ಟಿದ್ದಾರೆ ಮತ್ತು ಎಷ್ಟು ಜನ ಕಟ್ಟಲು ಬಾಕಿ ಇದ್ದಾರೆ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮುಂದಿನ ಸಭೆಯಲ್ಲಿ ಸಂಪೂರ್ಣ ವಿವರ ನೀಡುವುದಾಗಿ ಸಮಜಾಯಿಷಿ ನೀಡಿದರು.
ತುಂಬೆ ವೆಂಟೆಡ್ ಡ್ಯಾಂನಲ್ಲಿ ಸದ್ಯ 5 ಮೀಟರ್ ನೀರು ಸಂಗ್ರಹಣೆ ಇದೆ. ಡಿಸೆಂಬರ್‌ನಿಂದಲೇ ವಾಣಿಜ್ಯ, ಕೈಗಾರಿಕೆಗಳಿಗೆ ನೀರು ಪೂರೈಸುವುದನ್ನು ಕಡಿಮೆ ಮಾಡಬೇಕು ಎಂದು ಪಾಲಿಕೆ ಮುಖ್ಯಶಶಿಧರ್ ಹೆಗ್ಡೆ ಹೇಳಿದರು. ಅಲ್ಲದೆ ನೀರಿನ ಬಿಲ್‌ನ್ನು 66 ರೂ.ಗಳಿಂದ 100 ರೂ.ಗಳಿಗೆ ಏರಿಸುವ ಸಂಬಂಧಿಸಿ ವಿಷಯ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಸುಧೀರ್ ಶೆಟ್ಟಿ, ನೀರಿನ ಸಮಸ್ಯೆ ಈಗಿಂದಲೇ ಶುರುವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬೇಕಾಬಿಟ್ಟಿ ನೀರನ್ನು ಬಳಕೆ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮಾತನಾಡಿ ಕಳೆದ ವರ್ಷ ಮಳೆ ನೀರು ಕೊಯ್ಲು ಮಾಡಲು ಸಲಹೆ ನೀಡಿದ್ದರೂ, ಅನುಷ್ಠಾನವಾಗಿಲ್ಲ. ಪ್ರಸ್ತುತ ನೀರಿನ ಬಿಲ್‌ನ್ನು 66 ರೂ.ಗಳಿಂದ 100 ರೂ.ಗೆ ಏರಿಸುವುದು ಸರಿಯಲ್ಲ ಎಂದರು. ಜಲಭಾಗ್ಯ ಯೋಜನೆಯಡಿ ನೀರಿನ ಸಂಪರ್ಕ ಪಡೆಯುವವರಿಗೆ 100 ರೂ.ಗಳ ಬದಲಾಗಿ 75 ರೂ. ಬಿಲ್ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮೇಯರ್ ಹರಿನಾಥ್ ಪ್ರತಿಕ್ರಿಯಿಸಿ ಸರಕಾರವು ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಿರುವುದರಿಂದ ಪಾಲಿಕೆಗೆ ವಾರ್ಷಿಕ 20 ಕೋ.ರೂ. ಹೆಚ್ಚುವರಿ ಹೊರೆ ಬರುತ್ತದೆ. ಇದರಿಂದ ನೀರಿನ ಬಿಲ್ ಹೆಚ್ಚಳ ಮಾಡುವುದು ಅನಿವಾರ್ಯ. ಜಲಭಾಗ್ಯ ಯೋಜನೆಯಡಿ ನೀರಿನ ಸಂಪರ್ಕ ಹೊಂದಿರುವವರಿಗೆ 90 ರೂ.ಗೆ ಬಿಲ್ ನಿಗದಿಗೊಳಿಸಲಾಗುವುದು ಎಂದರು.
ಉಪಮೇಯರ್ ಸುಮಿತ್ರಾ ಕರಿಯ, ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಉಪಸ್ಥಿತರಿದ್ದರು.
ಆಯುಕ್ತರ ಮಾತಿಗೆ ಮೇಯರ್ ವಿಷಾದ!
ಪಾಲಿಕೆಗೆ ಸರಕಾರದಿಂದ 2014-15ರಿಂದ 2016-17ರ ಅವಧಿಗೆ ಮಂಜೂರಾದ 100 ಕೋ.ರೂ. ಅನುದಾನದಲ್ಲಿ ಕ್ರಿಯಾಯೋಜನೆಗೆ ಸರಕಾರದಿಂದ ಅನುಮತಿ ದೊರೆತಿದೆ. ಈ ಯೋಜನೆಯಡಿ ಅನುಮೋದನೆಗೊಂಡಿರುವ 57 ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಎಡಿಬಿ-2ರಡಿ ನಿರ್ವಹಿಸಲು ಕಾಮಗಾರಿಗಳ ಒಟ್ಟು ಮೊತ್ತ ರೂ.30 ಕೋ.ರೂ.ವನ್ನು ಎಡಿಬಿ-2 ಯೋಜನೆಗೆ ಹಸ್ತಾಂತರಿಸಲು ಶಾಸಕರು, ಮೇಯರ್, ಆಯುಕ್ತರು ಹಾಗೂ ಸದಸ್ಯರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದು ಕಚೇರಿ ಟಿಪ್ಪಣಿಯಲ್ಲಿ ಉಲ್ಲೇಖಗೊಂಡಿದೆ. ಈ ಸಭೆ ನಡೆದದ್ದು ಯಾವಾಗ? ಮೇಯರ್ ಭಾಗವಹಿಸಿದ್ದೀರಾ? ಪಾಲಿಕೆಯಲ್ಲಿ ತೀರ್ಮಾನವಾದ ಬಳಿಕ ಶಾಸಕರ ಮಟ್ಟದಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಇಲ್ಲಿ ತೀರ್ಮಾನವೇ ಆಗದಿರುವಾಗ ಈ ಕುರಿತು ಸಭೆ ನಡೆಸಿದ್ದೆಲ್ಲಿ? ಎಂದು ಪ್ರೇಮಾನಂದ ಶೆಟ್ಟಿ ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಪಾಲಿಕೆ ಆಯುಕ್ತ ಕಡತ ನೋಡುವ ಅಧಿಕಾರ ಸದಸ್ಯರಿಗಿಲ್ಲ ಎಂದರು.ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಇದು ಸದಸ್ಯರಿಗೆ ಮಾಡಿದ ಅವಮಾನ ಎಂದರು. ಮಾತು ವಿಕೋಪಕ್ಕೆ ತೆರಳುವುದನ್ನು ಅರಿತ ಮೇಯರ್ ಆಯುಕ್ತರ ಪರವಾಗಿ ವಿಷಾದ ವ್ಯಕ್ತಪಡಿಸಿ ಗೊಂದಲಕ್ಕೆ ತೆರೆ ಎಳೆದರು.







