ರಶ್ಯ-ಅಮೆರಿಕ ಸಂವಹನದ ಎಲ್ಲ ಕೊಂಡಿಗಳು ಸ್ಥಗಿತ : ಕ್ರೆಮ್ಲಿನ್ ಘೋಷಣೆ

ಮಸ್ಕೊ, ಡಿ. 22: ರಶ್ಯ ಮತ್ತು ಅಮೆರಿಕಗಳ ನಡುವಿನ ಬಹುತೇಕ ಎಲ್ಲ ಸಂಪರ್ಕ ಕೊಂಡಿಗಳು ಸ್ಥಗಿತಗೊಂಡಿವೆ ಎಂದು ರಶ್ಯ ಬುಧವಾರ ಹೇಳಿದೆ. ಆದರೆ, ಇದನ್ನು ಅಮೆರಿಕದ ವಿದೇಶಾಂಗ ಇಲಾಖೆ ನಿರಾಕರಿಸಿದೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (ನ್ಯಾಟೊ)ಯ ವಿಸ್ತರಣೆಯನ್ನು ಅಮೆರಿಕದ ಮುಂಬರುವ ಆಡಳಿತ ತಕ್ಷಣಕ್ಕೆ ತಿರಸ್ಕರಿಸುತ್ತದೆ ಎಂದು ರಶ್ಯ ನಿರೀಕ್ಷಿಸುವುದಿಲ್ಲ ಹಾಗೂ ಅಮೆರಿಕದೊಂದಿಗಿನ ಬಹುತೇಕ ಎಲ್ಲ ಸಂಪರ್ಕ ಸ್ಥಗಿತಗೊಂಡಿದೆ ಎಂದು ರಶ್ಯ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ ಎಂಬುದಾಗಿ ರಶ್ಯದ ವಾರ್ತಾ ಸಂಸ್ಥೆ ಆರ್‌ಐಎ ತಿಳಿಸಿದೆ.
ಮುಂಬರುವ ಡೊನಾಲ್ಡ್ ಟ್ರಂಪ್ ಸರಕಾರ, ರಶ್ಯದೊಂದಿಗಿನ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲಿ ನ್ಯಾಟೊಗೆ ನೀಡುತ್ತಿರುವ ನಿಧಿಯನ್ನು ನಿಲ್ಲಿಸಬಹುದು ಎಂಬ ಭಯ ನ್ಯಾಟೊದ ಸದಸ್ಯ ದೇಶಗಳಲ್ಲಿವೆ.
28 ಸದಸ್ಯರ ಸೇನಾ ಒಕ್ಕೂಟ (ನ್ಯಾಟೊ)ವನ್ನು ವಿಸ್ತರಿಸಿದರೆ ತಾನು ಅದರ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ರಶ್ಯ ಹೇಳಿದೆ.‘‘ಅಮೆರಿಕದೊಂದಿಗಿನ ಬಹುತೇಕ ಪ್ರತಿ ಹಂತದ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿದೆ’’ ಎಂದು ಪೆಸ್ಕೊವ್‌ರನ್ನು ಉಲ್ಲೇಖಿಸಿ ಆರ್‌ಐಎ ಹೇಳಿದೆ. ‘‘ನಾವು ಪರಸ್ಪರರೊಂದಿಗೆ ಸಂವಹನ ನಡೆಸುವುದಿಲ್ಲ. ಅಥವಾ ಸಂವಹನ ನಡೆಸಬೇಕಾದ ಅಗತ್ಯವಿದ್ದರೆ, ಕನಿಷ್ಠ ಸಂವಹನ ನಡೆಸಲಾಗುವುದು’’ ಎಂದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆ ವಕ್ತಾರ ಜಾನ್ ಕಿರ್ಬಿ, ‘‘ಈ ಹೇಳಿಕೆಯ ನಿಖರ ಅರ್ಥವೇನು ಎನ್ನುವುದನ್ನು ತಿಳಿಯುವುದು ಕಷ್ಟವಾಗಿದೆ. ಆದರೆ, ವಿವಿಧ ವಿಷಯಗಳಲ್ಲಿ ರಶ್ಯದೊಂದಿಗೆ ರಾಜತಾಂತ್ರಿಕ ಸಂಪರ್ಕ ಮುಂದುವರಿಯುತ್ತದೆ’’ ಎಂದು ಹೇಳಿಕೆಯೊಂದರಲ್ಲಿ ಕಿರ್ಬಿ ತಿಳಿಸಿದರು.







