ಸವಿತಾ ಪೀಠಕ್ಕೆ ಧರ್ಮಾಧಿಕಾರಿಯ ನೇಮಕ

ಉಡುಪಿ, ಡಿ. 22: ಸವಿತಾ ಸಮಾಜದ ಧರ್ಮಪೀಠಕ್ಕೆ ಧರ್ಮಾಧಿಕಾರಿ ಯಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕೊಂಚೂರು ಗ್ರಾಮದ ಶ್ರೀಧರಾನಂದರನ್ನು ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಗುರುವಾರ ನಿಯುಕ್ತಿಗೊಳಿಸಿದರು.
ರಾಜ್ಯದ ವಿವಿಧಡೆಗಳಿಂದ ಉಡುಪಿಗೆ ಆಗಮಿಸಿದ ಸವಿತಾ ಸಮಾಜದ ಮುಖಂಡರ ಸಮ್ಮುಖದಲ್ಲಿ ಪೇಜಾವರ ಶ್ರೀಗಳು ಶ್ರೀಧರಾನಂದರಿಗೆ ಭಕ್ತಿ ದೀಕ್ಷೆ, ಮಂತ್ರೋಪದೇಶ ನೀಡಿ ಹರಸಿದರು. ವೈದಿಕರು ಬೆಳಗ್ಗೆ ಸುದರ್ಶನ ಮೊದಲಾದ ಹೋಮಗಳನ್ನು ನಡೆಸಿದರು. ಬಳಿಕ ಕಲಶಾಭಿಷೇಕದ ಮೂಲಕ ಪಟ್ಟಾಭಿಷೇಕ, ತಪ್ತ ಮುದ್ರಾಧಾರಣೆ, ಕೃಷ್ಣ ಮಂತ್ರ ದೀಕ್ಷೆ, ಮಂತ್ರೋಪದೇಶ ಗಳನ್ನು ನೀಡಿ ಪೇಜಾವರ ಶ್ರೀಪಾದರು ವಟು ಶ್ರೀಧರಾನಂದರನ್ನು ಆಶೀರ್ವದಿಸಿದರು. ಮಠದ ಪುರೋಹಿತರಾದ ವಿಠಲ ಆಚಾರ್ಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ರಾಜಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಹಿಂದಿನಿಂದಲೂ ತಮಗೆ ಸವಿತಾ ಸಮಾಜ ದೊಂದಿಗೆ ಇದ್ದ ಸಂಬಂಧವನ್ನು ಮುಂದುವರಿಸಲಿದ್ದೇವೆ. ನೂತನ ಧರ್ಮಾಧಿಕಾರಿಯಿಂದ ಸವಿತಾ ಸಮಾಜ ಮತ್ತು ಹಿಂದೂ ಸಮಾಜಕ್ಕೆ ಮಾರ್ಗದರ್ಶನ ದೊರಕುವಂತಾಗಲಿ ಎಂದು ಹಾರೈಸಿದರು.
ಸವಿತಾ ಪೀಠದ ಕಾರ್ಯದರ್ಶಿ, ಬಳ್ಳಾರಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಶರಣ್ ಬಳ್ಳಾರಿ, ಪೀಠದ ಖಜಾಂಚಿ ರಮೇಶ್ ಚಿನ್ನಾಕಾರ್, ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ, ರಾಜ್ಯ ಸಮಾಜದ ಉಪಾಧ್ಯಕ್ಷ ರಮೇಶ್ ಶಹಾಬಾದ್, ಖಜಾಂಚಿ ವೆಂಕಟೇಶ್ ವೆಲ್ಕೂರ್, ವಿವಿಧ ಜಿಲ್ಲಾಧ್ಯಕ್ಷರಾದ ಉಡುಪಿಯ ಅರುಣ್ ಭಂಡಾರಿ, ಕಲಬುರಗಿಯ ನರಸಿಂಹ ಆರ್. ಮೋತಪಲ್ಲಿ, ರಾಮನಗರದ ಶ್ರೀನಿವಾಸ, ಶಿವಮೊಗ್ಗದ ಮೋಹನ್, ಯಾದಗಿರಿಯ ಅಪ್ಪಣ್ಣ ಚಿನ್ನಾಕಾರ್, ಬೆಂಗಳೂರು ವಜ್ರಪ್ಪ, ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸತೀಶ್ ಭಂಡಾರಿ, ಪೀಠದ ವ್ಯವಸ್ಥಾಪಕ ರಾಘವೇಂದ್ರ ವಾಡಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು ‘ ನಾವು ಸವಿತಾ ಸಮಾಜದ ಅನೇಕ ದೇವಸ್ಥಾನಗಳ ಸಮಾರಂಭಗಳಿಗೆ ಹೋಗಿರುವ ಸಂಪರ್ಕ ವಿದೆ. ಸಮಾಜದವರು ತಮ್ಮ ವಟುವಿಗೆ ದೀಕ್ಷೆ ಕೊಡಬೇಕೆಂದು ಅಪೇಕ್ಷೆಪಟ್ಟಂತೆ ಪೀಠದ ಧರ್ಮಾಧಿಕಾರಿಯಾಗಿ ನೇಮಿಸಿದ್ದೇವೆ. ವಟುವಿಗೆ ಈಗಾಗಲೇ ಹೆಸರು ಇರುವುದರಿಂದ ನೂತನ ಹೆಸರನ್ನು ಇಡಲಿಲ್ಲ. ಅವರು ಅಪೇಕ್ಷೆಪಟ್ಟರೆ ಮುಂದೆ ಸನ್ಯಾ ದೀಕ್ಷೆಯನ್ನು ನೀಡಲಿದ್ದೇವೆ. ಭಕ್ತಿ ದೀಕ್ಷೆಯನ್ನು ಯಾರೂ ಪಡೆದು ಕೊಳ್ಳಬಹುದು. ಭಕ್ತಿ ದೀಕ್ಷೆ ಪಡೆದ ಯಾರೇ ಆದರೂ ಅವರು ಬ್ರಾಹ್ಮಣರಿಗೆ ಸಮಾನರೆಂದು ಮಧ್ವಾಚಾರ್ಯರು ತಿಳಿಸಿದ್ದಾರೆ’ ಎಂದರು.
ಪರಿಚಯ: ಶ್ರೀಧರಾನಂದರ ಮೂಲ ಹೆಸರು ಶ್ರೀಧರ. ಬಾಗಲಕೋಟೆಯ ಶ್ರೀಶ್ರದ್ಧಾನಂದ ಸ್ವಾಮೀಜಿ ಅವರ ಸಂಪರ್ಕಕ್ಕೆ ಬಂದಾಗ ಶ್ರೀಧರರಿಗೆ ಶ್ರೀಧರಾನಂದ ಸ್ವಾಮೀಜಿ ಎಂದು ಕರೆದರು. ಶ್ರೀಧರಾನಂದರು ತುಮಕೂರು ಸಿದ್ಧಗಂಗಾ ಮಠ ಮತ್ತು ಆದಿಚುಂಚನಗಿರಿ ಮಠದಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದು ಕೊಂಚೂರು ಗ್ರಾಮದಲ್ಲಿ ಮೂರು ವರ್ಷಗಳಿಂದ ಮಠ ಹಾಗೂ ಗೋಶಾಲೆ ನಡೆಸುತ್ತಿದ್ದಾರೆ.
ಶ್ರೀಧರ ಅವರ ತಂದೆ ಎಚ್.ಆಂಜನೇಯ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ವಾಡಿ ಶಾಖೆಯಲ್ಲಿ ಸಹಾಯಕ ಪ್ರಬಂಧಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ತಾಯಿ ಪದ್ಮಾವತಿ, ಇಂಜಿನಿಯರಿಂಗ್ ಓದುತ್ತಿರುವ ತಮ್ಮ ಸಚ್ಚಿದಾನಂದ ಇಂದು ಉಸ್ಥಿತರಿದ್ದರು. ತಂಗಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತಿದ್ದಾರೆ. ಆಂಜನೇಯರು ತಮ್ಮ ನಾಲ್ಕು ಎಕ್ರೆ ಜಾಗವನ್ನು ಸವಿತಾ ಸಮಾಜದ ಪೀಠಕ್ಕೆ ಕೊಟ್ಟಿದ್ದು, ಅಲ್ಲಿ ಮಠ ಮತ್ತು 34 ದೇಸೀ ತಳಿಯ ಗೋವುಗಳಿರುವ ಗೋಶಾಲೆಯನ್ನು ಶ್ರೀಧರಾನಂದರು ನಡೆಸುತ್ತಿದ್ದಾರೆ.
ಪೇಜಾವರ ಶ್ರೀಗಳಿಂದ ಭಕ್ತಿ ದೀಕ್ಷೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ‘ನಮ್ಮ ಸಮಾಜದ ಕುಲಕಸುಬು ಆಯುಷ್ಕರ್ಮ. ಈಗ ಉಳಿದಿರುವುದು ಕ್ಷೌರಿಕ ವೃತ್ತಿ ಮಾತ್ರ. ಆಯುರ್ವೇದ, ನಾಟಿವೈದ್ಯ ಪದ್ಧತಿ ಮತ್ತು ನಾಗಸ್ವರ ವಾದನವೂ ನಮ್ಮ ಕುಲಕಸುಬಾದರೂ ನಾವದನ್ನು ಮರೆತಿದ್ದೇವೆ. ಇದನ್ನು ಮತ್ತೆ ಮಠದ ಮೂಲಕ ಪುನಶ್ಚೇತನಗೊಳಿಸಲು ನಿರ್ಧರಿಸಿದ್ದೇವೆ ಎಂದರು.
ನಮ್ಮ ಸಮಾಜದ ಯುವಕರನ್ನು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಗೆ ಕಳುಹಿಸಿ ಆಯುರ್ವೇದ ಕಲಿಸಲು, ಹಳ್ಳಿ ನಾಟಿ ವೈದ್ಯರ ಮೂಲಕ ಯುವಕರಿಗೆ ನಾಟಿ ವೈದ್ಯ ಪದ್ಧತಿಯನ್ನು ಮತ್ತೆ ಕಲಿಸಲು ಪ್ರಯತ್ನಿಸುತ್ತೇವೆ. ಇಂದು ಪೇಜಾವರ ಶ್ರೀಗಳಿಂದ ಧರ್ಮಾಧಿಕಾರಿ ದೀಕ್ಷೆ ಪಡೆದಿದ್ದು, ಶೀಘ್ರವೇ ವರ್ಣಾಶ್ರಮ ಸ್ವೀಕರಿಸುತ್ತೇವೆ. ಮೂರು ವರ್ಷಗಳ ಬಳಿಕ ಪೇಜಾವರಶ್ರೀ ಗಳಿಂದಲೇ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದೇವೆ’ ಎಂದರು.







