ಕೊಡೇರಿ ಬ್ರೇಕ್‌ವಾಟರ್ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ

ಕುಂದಾಪುರ, ಡಿ.22: ಕೊಡೇರಿಯಲ್ಲಿ 33 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಗೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬುಧವಾ ಶಂಕುಸ್ಥಾಪನೆ ನೆರವೇರಿಸಿದರು.
ಬೈಂದೂರು ಕ್ಷೇತ್ರಕ್ಕೆ ಮತ್ಸ್ಯಾಶ್ರಯ ಯೋಜನೆಯಡಿ 190 ಮನೆಯನ್ನು ನೀಡಲಾಗುವುದು. ಉಡುಪಿ ಜಿಲ್ಲೆಯಲ್ಲಿ ಬೇರಾವ ಕ್ಷೇತ್ರಕ್ಕೂ 90ಕ್ಕಿಂತ ಹೆಚ್ಚು ಮನೆಗಳನ್ನು ನೀಡಿಲ್ಲ. ಸೀಮೆಎಣ್ಣೆಯನ್ನು ನಾಳೆಯಿಂದ ಒದಗಿಸುವ ಕಾರ್ಯ ಮಾಡಲಾಗುವುದು. ಕಾಮಗಾರಿಯನ್ನು ಸಮಯಮಿತಿಯೊಳಗೆ ಗುಣಮಟ್ಟಕ್ಕೆ ರಾಜಿ ಇಲ್ಲದೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಸಂಸದರ ಆದರ್ಶ ಗ್ರಾಮವನ್ನಾಗಿ ದೊಂಬೆ ಆಯ್ಕೆಯಾಗಿದ್ದು, ಇಲ್ಲಿ ಸಮುದ್ರ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಗ್ರಾಮೀಣರಿಗೆ ಪೂರೈಸುವುದಲ್ಲದೆ, ಸಮಗ್ರ ಅಭಿವೃದ್ಧಿಗೆ ಹಣ ಹರಿದುಬಂದು ದೊಂಬೆ, ಕಳಿಹಿತ್ಲು, ಅಳಿವೆಗದ್ದೆ ಗಳು ಸಮಗ್ರ ಅಭಿವೃದ್ಧಿ ಹೊಂದಲಿವೆ. ಕೊಡೇರಿ ರಸ್ತೆ ನಿರ್ಮಾಣಕ್ಕೂ ಟೆಂಡರ್ ಶೀಘ್ರವೇ ಆಗಲಿದ್ದು, ಒಟ್ಟು ಸುಮಾರು 300 ಕೋಟಿ ರೂ. ಕಾಮಗಾರಿಗಳು ಬೈಂದೂರು ಕ್ಷೇತ್ರಕ್ಕೆ ಲಭ್ಯವಾಗಿವೆ ಎಂದರು.
ಈ ಸಂದರ್ಭದಲ್ಲಿ ನಾಡದೋಣಿ ಮೀನುಗಾರರ ಮುಖಂಡ ನವೀನ್ ಚಂದ್ರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಚಿವರಿಗೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ಖಾರ್ವಿ, ಉಪಾಧ್ಯಕ್ಷೆ ಶೇಖರ್ ಖಾರ್ವಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯೆ ಶ್ಯಾಮಲ ಕುಂದರ್, ಕೆಡಿಪಿ ಸದಸ್ಯ ರಾಜು ಪೂಜಾರಿ, ಮೀನುಗಾರರ ಮುಖಂಡರಾದ ಮದನ್ ಕುಮಾರ್, ವಿಜಯಕುಮಾರ್ ಶೆಟ್ಟಿ, ರಾಜು ದೇವಾಡಿಗ, ಜಗದೀಶ್ ದೇವಾಡಿಗ, ತಹಶೀಲ್ದಾರ್ ಕಿರಣ್ ಮೊದಲಾದ ವರು ಉಪಸ್ಥಿತರಿದ್ದರು.
ಶಿರೂರು ಅಳಿವೆಗದ್ದೆ ಮೀನುಗಾರಿಕೆ ನೈಸರ್ಗಿಕ ಬಂದರಿನ 280 ಲಕ್ಷ ವೆಚ್ಚದ ಮೀನುಗಾರಿಕೆ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅವಘಡದಲ್ಲಿ ಮೃತಪಟ್ಟ ಮೀನುಗಾರರಿಗೆ ಪರಿಹಾರದ ಮೊತ್ತವನ್ನು ಐದು ಲಕ್ಷ ರೂ.ಗೆ ಏರಿಸಲಾಗುವುದು ಎಂದರು.
ಶಾಸಕ ಗೋಪಾಲ ಪೂಜಾರಿ, ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ, ಗ್ರಾಪಂ ಅಧ್ಯಕ್ಷ ದಿಲ್‌ಶಾದ್ ಬೇಗಂ, ಉಪಾಧ್ಯಕ್ಷ ನಾಗೇಶ್ ಮೊಗೇರ, ಜಿಪಂ ಸದಸ್ಯ ಸುರೇಶ್ ಬಟ ವಾಡೆ, ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಮೌಲಾನ ದಸ್ತಗಿರಿ ಸಾಹೇಬ್ ಉಪಸ್ಥಿತರಿದ್ದರು.







